ಉಳ್ಳಾಲ: ಕಂಪೌಂಡ್ ಉರುಳಿ ಬಿದ್ದು, ಮನೆ ಕುಸಿದ ಕಾರಣ ಒಂದೇ ಕುಟುಂಬದ ನಾಲ್ವರು ಮಲಗಿದ್ದಲ್ಲೇ ಸಾವನ್ನಪ್ಪಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಮದನಿನಗರ ಎಂಬಲ್ಲಿ ಬುಧವಾರ ನಸುಕಿನ ಜಾವ ಸಂಭವಿಸಿದೆ. ಘಟನಾ ಸ್ಥಳಕ್ಕೆ ವಿಧಾನಸಭಾ ಸಭಾಧ್ಯಕ್ಷ ಹಾಗೂ ಶಾಸಕ ಯು.ಟಿ ಖಾದರ್, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಜೊತೆಗೆ ಪರಿಹಾರಕ್ಕೆ ಸಹಕಾರ ನೀಡುವುದಾಗಿ ಇದೇ ವೇಳೆ ಅವರು ಭರವಸೆ ನೀಡಿದರು.
ಮಲಗಿದ್ದಲ್ಲೇ ಶವವಾದರು: ಮನೆಯೊಳಗೆ ಮಲಗಿದ್ದ ಯಾಸಿರ್ (45), ಅವರ ಪತ್ನಿ ಮರಿಯಮ್ಮ(40) ಮಕ್ಕಳಾದ ರಿಹಾನ (11) ಮತ್ತು ರಿಫಾನ (17) ಮೃತಪಟ್ಟವರು. ಅಬೂಬಕ್ಕರ್ ಎಂಬವರಿಗೆ ಸಂಬಂಧಿಸಿದ ಕಂಪೌಂಡ್ ಕುಸಿದು ಯಾಸಿರ್ ಅವರ ಮನೆ ಮೇಲೆ ಬಿದ್ದು, ಈ ದುರಂತ ಸಂಭವಿಸಿದೆ. ಯಾಸೀರ್ ಮಂಗಳೂರಿನ ಬಂದರಿನಲ್ಲಿ ಮಡ್ಡಿ ಆಯಿಲ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ರಾತ್ರಿ ಊಟ ಮುಗಿಸಿ ಮನೆಯ ಕೋಣೆಯಲ್ಲಿ ಮಲಗಿದ್ದ ಇಬ್ಬರು ಪುತ್ರಿಯರು ಹಾಗೂ ದಂಪತಿ ಬೆಳಗಿನ ಜಾವ ಇಲ್ಲವಾಗಿದ್ದಾರೆ. ರಾತ್ರಿಯಿಡೀ ಮಳೆಯಾದ ಪರಿಣಾಮ ಕಂಪೌಂಡ್ ಹಾಗೂ ಎರಡು ಅಡಿಕೆ ಮರಗಳು ಯಾಸಿರ್ ಅವರ ಮನೆ ಮೇಲೆ ಉರುಳಿಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ.
ಆರು ತಿಂಗಳ ಹಿಂದೆಯಷ್ಟೇ ಮನೆಗೆ ವಾಪಸ್ ಆಗಿದ್ದ ಕುಟುಂಬ: ರಿಹಾನಾ ಹಾಗೂ ರಿಫಾನ ನಗರದ ಖಾಸಗಿ ಶಿಕ್ಷಣ ಸಂಸ್ಥೆಯ ಶಾಲೆ ಹಾಗೂ ಕಾಲೇಜಿಗೆ ತೆರಳುತ್ತಿದ್ದರು. ಆರು ವರ್ಷಗಳ ಹಿಂದೆ ಮನೆ ಖರೀದಿಸಿದ್ದ ಇವರು ಒಂದು ವರ್ಷ ಮನೆಯನ್ನು ಲೀಸ್ಗೆ ನೀಡಿ ಆರು ತಿಂಗಳ ಹಿಂದಷ್ಟೇ ಮನೆಗೆ ವಾಪಸ್ ಆಗಿದ್ದರು. ಎರಡು ವರ್ಷಗಳ ಹಿಂದೆಯೂ ಮನೆ ಮೇಲೆ ಇದೇ ರೀತಿ ಕಂಪೌಂಡ್ ಕುಸಿದಿತ್ತು. ಆದ್ರೆ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.
ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ನಾಲ್ಕು ಮೃತದೇಹಗಳನ್ನು ಹೊರತೆಗೆಯುವಲ್ಲಿ ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಸ್ಥಳೀಯರು ಮೂರು ಮೃತದೇಹಗಳನ್ನು ಅವಶೇಷಗಳಡಿಯಿಂದ ಹೊರತೆಗೆದರೆ, ಅಗ್ನಿಶಾಮಕ ದಳ ಸ್ಥಳೀಯರ ಜೊತೆ ಸೇರಿಕೊಂಡು ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕೊನೆಯ ಮೃತದೇಹವನ್ನು ಹೊರತೆಗೆದಿದ್ದಾರೆ. ದೊಡ್ಡ ಮಗಳು ರಶೀನಾಳನ್ನು ಕೇರಳ ಕಡೆಗೆ ವಿವಾಹ ಮಾಡಿಕೊಡಲಾಗಿದ್ದು, ಬಕ್ರೀದ್ಗೆಂದು ಬಂದವರು ನಿನ್ನೆಯಷ್ಟೇ ಗಂಡನ ಮನೆಗೆ ವಾಪಸ್ ಆಗಿದ್ದರು.
ಇದನ್ನೂ ಓದಿ: ಉಳ್ಳಾಲ; ಮನೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು - house collapsed in Ullal