ಚಿಕ್ಕೋಡಿ(ಬೆಳಗಾವಿ): ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆಯ ಮೊದಲನೇ ಮಹಡಿಯಿಂದ ವಿದ್ಯಾರ್ಥಿನಿಯೊಬ್ಬರು ಆಯತಪ್ಪಿ ಬಿದ್ದು ಮೃತಪಟ್ಟಿರುವ ಘಟನೆ ಹಿರೇಕೋಡಿ ಗ್ರಾಮದಲ್ಲಿ ನಡೆದಿದೆ. ಗೋಕಾಕ್ ತಾಲೂಕಿನ ಶಿಂದಿ ಕುರಬೇಟ್ ಗ್ರಾಮದ ಆಫ್ರೀನ್ ಜಮಾದಾರ ಮೃತ ವಿದ್ಯಾರ್ಥಿನಿ.
ಇಂದು ಪರೀಕ್ಷೆಯಿದ್ದ ಕಾರಣ ವಿದ್ಯಾರ್ಥಿನಿ ನಿನ್ನೆ(ಸೋಮವಾರ) ರಾತ್ರಿ ಮೊದಲನೇ ಮಹಡಿಯಲ್ಲಿ ಕುಳಿತು ಓದುತ್ತಿದ್ದರು. ಈ ವೇಳೆ ಆಯತಪ್ಪಿ ಕೆಳಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, "ತಡರಾತ್ರಿ ಘಟನೆ ಸಂಭವಿಸಿದೆ. ಕಟ್ಟಡದಲ್ಲಿ ಸಿಸಿಟಿವಿ ಕ್ಯಾಮರಾ ಇಲ್ಲ. ಇದೇ ಹಾಸ್ಟೆಲ್ನಲ್ಲಿ ಮೃತ ವಿದ್ಯಾರ್ಥಿನಿಯ ಸಹೋದರಿ ಇದ್ದಾರೆ. ಪರೀಕ್ಷೆ ಇದ್ದುದರಿಂದ ವಿದ್ಯಾರ್ಥಿನಿ ರಾತ್ರಿ ಓದುತ್ತಿದ್ದಳು. ಸ್ನೇಹಿತೆಯರು ರಾತ್ರಿ ಎದ್ದು ನೋಡಿದಾಗ ಆಕೆ ಕಾಣಿಸಿರಲಿಲ್ಲ. ಇದರಿಂದಾಗಿ ಎಲ್ಲರೂ ಹುಡುಕಾಡಿದಾಗ ಮಹಡಿ ಮೇಲಿಂದ ಕೆಳಗೆ ಬಿದ್ದಿರುವುದು ಕಂಡುಬಂದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಾಸ್ಟೆಲ್ನಲ್ಲಿ ಲೋಪಗಳು ಕಂಡುಬಂದರೆ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಪೊಲೀಸರಿಗೆ ಸೂಚಿಸಿದ್ದೇನೆ" ಎಂದು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರಲ್ಲಿ ಮಳೆಗೆ ಕುಸಿದ ನಿರ್ಮಾಣ ಹಂತದ ಕಟ್ಟಡ; ಅವಶೇಷಗಳಡಿ ಕಾರ್ಮಿಕರು ಸಿಲುಕಿರುವ ಶಂಕೆ