ಹಾವೇರಿ: ಕುದುರೆ ಸವಾರಿ ಕಲಿಯಬೇಕು ಎಂಬುದು ಬಹುತೇಕ ಜನರಿಗೆ ಇರುವ ಆಸೆ. ಹಾವೇರಿ ನಗರ ವಾಸಿಗಳಿಗೆ ಇಷ್ಟುದಿನ ಇದು ಗಗನಕುಸುಮವಾಗಿತ್ತು. ಕುದುರೆ ರೈಡಿಂಗ್ ಕಲಿಯಬೇಕಾದರೆ ದೂರದ ಶಿವಮೊಗ್ಗ, ಮಂಗಳೂರು, ಬೆಂಗಳೂರು ಮತ್ತು ಮೈಸೂರಿನಲ್ಲಿ ಕಲಿಯಬೇಕಾದ ಅನಿವಾರ್ಯತೆ ಇತ್ತು. ಇದೀಗ ಹಾವೇರಿಯಲ್ಲಿ ಕುದುರೆ ರೈಡಿಂಗ್ ಸ್ಕೂಲ್ ಆರಂಭಿಸಲಾಗಿದೆ.
ನಗರದಲ್ಲಿ ನಾಲ್ಕು ಕುದುರೆಗಳನ್ನು ಇಟ್ಟುಕೊಂಡು ಮಹ್ಮದ್ ಎಂಬವರು ಕಿಂಗ್ ಹಾರ್ಸ್ ರೈಡಿಂಗ್ ಸ್ಕೂಲ್ ಶುರು ಮಾಡಿದ್ದಾರೆ. ಈ ಸ್ಕೂಲ್‌ನಲ್ಲಿ ಏಳು ವರ್ಷ ವಯಸ್ಸಿನ ಮಕ್ಕಳು, ಮಹಿಳೆಯರು, ವಯೋವೃದ್ಧರಿಗೆ ಹಾರ್ಸ್ ರೈಡಿಂಗ್ ಕಲಿಸುತ್ತಿದ್ದಾರೆ. ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಮೊದಲು ಕುದುರೆಯ ಬಗ್ಗೆ ಪರಿಚಯ ಮಾಡಿಸುತ್ತಾರೆ. ಪ್ರತಿನಿತ್ಯ
45 ನಿಮಿಷಗಳಂತೆ ಮೂರು ತಿಂಗಳು ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಉತ್ತಮ ಕುದುರೆ ರೈಡರ್ ಆಗಿ ಮಾಡಲಾಗುತ್ತದೆ. ತರಬೇತಿದಾರರಿಗೆ ಅವರದೇ ಕುದುರೆ ನೀಡುತ್ತಾರೆ. ಕುದುರೆ ಪಡೆದ ತರಬೇತುದಾರ ಅದರ ಚಲನವಲನ ಅಭ್ಯಾಸ ಮಾಡುವ ಮೂಲಕ ರೈಡಿಂಗ್ ಪ್ರಾಕ್ಟಿಸ್ ಮಾಡುತ್ತಾರೆ.
ನಂತರ ಕುದುರೆಗೆ ಲಗಾಮ್ ಹಾಕುವುದು, ಕುದುರೆಯ ಮೇಲೆ ಕುಳಿಕುಕೊಳ್ಳಲು ಶ್ಯಾಡಲ್ ಹಾಕುವುದನ್ನು ಕಲಿಸುತ್ತಾರೆ. ಕುದುರೆ ಹಿಡಿದುಕೊಂಡು ರೈಡಿಂಗ್ ಗ್ರೌಂಡ್ನಲ್ಲಿ ಹೆಜ್ಜೆ ಹಾಕುವುದನ್ನು ಹೇಳಿಕೊಡುತ್ತಾರೆ. ಕೆಲವು ದಿನಗಳ ನಂತರ ಕುದುರೆ ಮೇಲೆ ಕುಳಿತುಕೊಂಡು ರೈಡಿಂಗ್ ಮಾಡಿಸಲಾಗುತ್ತದೆ. ಬಳಿಕ ಕುದುರೆ ಓಡುವುದು, ಜಿಗ್ ಜಾಗ್ ರೈಡಿಂಗ್ ಜಂಪಿಂಗ್ ಸೇರಿದಂತೆ ವಿವಿಧ ರೀತಿಯ ಅಭ್ಯಾಸಗಳ ಮೂಲಕ ಸಂಪೂರ್ಣವಾಗಿ ಕುದುರೆ ಸವಾರಿ ಮಾಡುವುದು ಹಾಗು ಕುದುರೆಯನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ಸಹ ಕಲಿಸಲಾಗುತ್ತದೆ. ಇಲ್ಲಿ ತರಬೇತಿ ಪಡೆದು ರೈಡರ್ ಆದ ಸ್ವಂತವಾಗಿ ಕುದುರೆಯನ್ನು ಮನೆಯಲ್ಲಿ ಸಾಕುಬಹುದು. ಜೊತೆಗೆ ಪ್ರತಿದಿನ ಕುದುರೆ ಸವಾರಿ ಮಾಡುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಎನ್ನುತ್ತಾರೆ ಕುದುರೆ ರೈಡಿಂಗ್ ತರಬೇತಿದಾರ ಮಹ್ಮದ್.
ಮನರಂಜನೆ ಮತ್ತು ವ್ಯಾಯಾಮ ಇರುವ ಏಕೈಕ ಅಭ್ಯಾಸ ಎಂದರೆ ಕುದುರೆ ಸವಾರಿ. ಇದರಿಂದ ಬೊಜ್ಜು ಕರಗುತ್ತದೆ. ಶಿರದಿಂದ ಹಿಡಿದು ಪಾದದವರೆಗೆನ ಎಲ್ಲಾ ಅಂಗಾಂಗಗಳಿಗೆ ವ್ಯಾಯಾಮವಾಗುತ್ತೆ. ಕುದುರೆ ಸವಾರಿ ಆರಂಭಿಸಿ ನೀವು ಮೂರು ತಿಂಗಳಲ್ಲಿ ದೇಹದ ಆರೋಗ್ಯವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಕುದುರೆ ಸಹ ಮನುಷ್ಯನ ಜೊತೆ ಸ್ನೇಹಜೀವಿಯಾಗಿರುತ್ತದೆ. ಕುದುರೆ ಸವಾರಿ ತರಬೇತಿ ಶಾಲೆ ಹಾವೇರಿ ಬಿಟ್ಟರೆ ಉತ್ತರ ಕರ್ನಾಟಕದಲ್ಲಿ ಎಲ್ಲಿಯೂ ಇಲ್ಲ ಎಂದು ಶಾಲೆಯ ತರಬೇತುದಾರ ಮಹ್ಮದ್ ತಿಳಿಸಿದರು.
''ಇಲ್ಲಿ ತರಬೇತಿ ಪಡೆದರೆ, ದೇಶದಲ್ಲಿ ನಡೆಯುವ ಕುದುರೆ ಸವಾರಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಅನುಕೂಲವಾಗುತ್ತದೆ. ಕುದುರೆ ಹೃದಯ, ಮನುಷ್ಯನ ಹೃದಯಕ್ಕೆ ಹೆಚ್ಚು ಹತ್ತಿರವಾಗುತ್ತದೆ. ಕುದುರೆ ಸವಾರಿ ಕಲಿಕೆ ನಂತರ, ಆ ಕುದುರೆಯು ನಮ್ಮನ್ನು ಬಿಟ್ಟು ಹೋಗಲಾಗದಂತೆ ಅಟ್ಯಾಚ್ಮೆಂಟ್ ಅನ್ನು ಬೆಳೆಸಿಕೊಳ್ಳುತ್ತದೆ. ಜೊತೆಗೆ ಕುದುರೆ ಸವಾರಿಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಇದು ನನ್ನ ಸ್ವಂತ ಅನುಭವಕ್ಕೆ ಬಂದಿದೆ. ಕುದುರೆಗಳಿಗೆ ವಿಭಿನ್ನ ಹೆಸರಿಟ್ಟಿದ್ದು, ತರಬೇತಿ ಪಡೆಯುವವರು ಹೆಸರು ಕೂಗುತ್ತಿದ್ದಂತೆ ಕುದುರೆಗಳ ಸ್ಪಂದಿಸುವುದು ಆಶ್ಚರ್ಯವಾಗುತ್ತದೆ'' ಎನ್ನುತ್ತಾರೆ ಕುದುರೆ ಸವಾರಿ ಕಲಿಯಲು ಬಂದಿರುವ ಚಂದ್ರಶೇಖರ್.
ಇದನ್ನೂ ಓದಿ: ಕೈಕೊಟ್ಟ ಜಂಬೂನೇರಳೆ: ಸಾಂಪ್ರದಾಯಿಕ ಕೃಷಿ ಬಿಟ್ಟು ತೋಟಗಾರಿಕೆ ಕೃಷಿ ನಂಬಿದ್ದ ಹಾವೇರಿ ರೈತ ಕಂಗಾಲು - Jambu purple crop