ಹಾವೇರಿ: ಉತ್ತರ ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲಿ ಒಂದಾಗಿರುವ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕು ಮೈಲಾರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆಯು ಫೆಬ್ರವರಿ 26 ರಂದು ನಡೆಯಲಿದೆ. ಕಾರ್ಣಿಕ ನುಡಿಯುವ ಹಾಗೂ ಪವಾಡ ನಡೆಸುವ ಈ ಜಾತ್ರೆಯಲ್ಲಿ ದೈವವಾಣಿ ಕೇಳಲು ಸುಮಾರು 25 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಲಿದ್ದಾರೆ ಎಂದು ಮೈಲಾರಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೆಂಕಪ್ಪಯ್ಯ ಒಡೆಯರ್ ತಿಳಿಸಿದ್ದಾರೆ.
ಎಲ್ಲ ದೇವರ ಜಾತ್ರೆಗಳಂತೆ ಇಲ್ಲಿ ರಥೋತ್ಸವ ನಡೆಯುವುದಿಲ್ಲ. ಬದಲಿಗೆ ಇಲ್ಲಿ ಗೊರವಯ್ಯ 15 ಅಡಿ ಬಿಲ್ಲನ್ನೇರಿ ಕಾರ್ಣಿಕ ನುಡಿದು ಧುಮುಕುತ್ತಾನೆ. ಈ ರೀತಿ ಕಾರ್ಣಿಕವನ್ನು ಮೈಲಾಲಿಂಗೇಶ್ವರನೇ ಗೊರವಯ್ಯನ ರೂಪದಲ್ಲಿ ಬಂದು ನುಡಿಸುತ್ತಾನೆ ಎನ್ನುವ ನಂಬಿಕೆ ಇಲ್ಲಿನ ಭಕ್ತರಲ್ಲಿದೆ.
ಫೆಬ್ರವರಿ 26 ರಂದು ಸಂಜೆ 5.30ಕ್ಕೆ ಮೈಲಾರಲಿಂಗೇಶ್ವರನ ಕಾರ್ಣಿಕೋತ್ಸವ ಕಾರ್ಯಕ್ರಮ ನಡೆಯಲಿದೆ. ಈ ವರ್ಷದಲ್ಲಿ ಬೀಳುವ ಮಳೆ- ಬೆಳೆ, ರಾಜಕೀಯ ಮತ್ತು ಮುಂದೆ ಯಾವ ರೀತಿ ಬದುಕಬೇಕು, ಬಾಳಬೇಕು ಎನ್ನುವುದಷ್ಟೇ ಅಲ್ಲದೆ, ಎಲ್ಲ ವಲಯಗಳ ಭವಿಷ್ಯವನ್ನು ಈ ಕಾರ್ಣಿಕದಲ್ಲಿ ನುಡಿಯುತ್ತಾರೆ. ಒಂದು ವರ್ಷದ ಭವಿಷ್ಯವನ್ನು ಒಂದು ವಾಕ್ಯದಲ್ಲಿ ಹೇಳುವಂತಹದ್ದು ಕಾರ್ಣಿಕ ಎಂದು ವೆಂಕಪ್ಪಯ್ಯ ಒಡೆಯರ್ ತಿಳಿಸಿದರು.
ಮೈಲಾರಾ ಎಂದು ಹೆಸರು ಬಂದಿದ್ದೇಕೆ?: ಮಲ್ಲಾಸುರ ಮತ್ತು ಮಣಿಕಾಸುರ ಎಂಬ ಅಸುರರನ್ನು ಸಂಹಾರ ಮಾಡಿದ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ಮೈಲಾರ ಎಂದು ಹೆಸರು ಬಂದಿದೆ. ಬಲಿ ಚಕ್ರವರ್ತಿಯ ಮಕ್ಕಳಾದ ಮಲ್ಲಾಸುರ ಮತ್ತು ಮಣಿಕಾಸುರನ್ನನ್ನು ಸಂವಾರ ಮಾಡಲು ಸ್ವತಃ ಶಿವ ಪಾರ್ವತಿಯೇ ಮೈಲಾರಲಿಂಗ ಮತ್ತು ಗಂಗಮಾಳಮ್ಮ ರೂಪದಲ್ಲಿ ಭೂಮಿಯಲ್ಲಿ ಅವತರಿಸಿದರು. ರಥಸಪ್ತಮಿ ದಿನ ಮೈಲಾರಕ್ಕೆ ಆಗಮಿಸುವ ಶಿವಪಾರ್ವತಿ 11ನೇ ದಿನ ಡೆಂಕನಮರಡಿಯಲ್ಲಿ ಮಲ್ಲಾಸುರ ಮತ್ತು ಮಣಿಕಾಸುರ ಸಂಹಾರ ಮಾಡಿದ್ದರಿಂದ ಪ್ರತೀ ವರ್ಷ ಕಾರ್ಣಿಕೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಕಾರ್ಣಿಕದಲ್ಲಿ ನುಡಿದ ಭವಿಷ್ಯ ಮತ್ತು ವಾಸ್ತವ: ಮೈಲಾರದಲ್ಲಿ ಹಲವು ದಶಕಗಳಿಂದ ಕಾರ್ಣಿಕೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಉದಾಹರಣೆಗೆ 1857ರಲ್ಲಿ ಮೈಲಾರ ಗೊರವಯ್ಯ ಕೆಂಪುನೋಣಗಳಿಗೆ ಕಷ್ಟಪ್ರಾಪ್ತಿ ಎಂದು ನುಡಿದಿದ್ದು, ಆ ವರ್ಷ ಬ್ರಿಟಿಷರು ಸಿಪಾಯಿದಂಗೆ ಎದುರಿಸಬೇಕಾಯಿತು. ಇನ್ನು 1984 ರಲ್ಲಿ ಇಂದಿರಾ ಗಾಂಧಿ ಹತ್ಯೆಯಾದ ವರ್ಷ ಮರ್ತಕ್ಕೆ ಮಬ್ಬು ಕವಿಯತಲೇ ಪರಾಕ್ ಎಂದು ನುಡಿದಿದ್ದು, 1991ರಲ್ಲಿ ರಾಜೀವ ಗಾಂಧಿ ಹತ್ಯೆಯಾದ ವರ್ಷ, ಮುತ್ತು ಒಡೆದು ಮೂರು ಪಾಲಾಯಿತಲೇ ಪರಾಕ್ ಎಂದು ಕಾರ್ಣಿಕ ನುಡಿಯಲಾಗಿತ್ತು ಎಂದು ತಿಳಿಸಿದರು.
ಪವಾಡಗಳು: ಮೈಲಾರಲಿಂಗೇಶ್ವರ ಜಾತ್ರೆಯ ಮತ್ತೊಂದು ವಿಶೇಷತೆ ಅಂದರೆ ಪವಾಡಗಳನ್ನು ನಡೆಸುವುದು. ಇಲ್ಲಿಯ ಕಂಚಾರವೀರರು ಬಾಬುದಾರರು ಸುಮಾರು 10ಕ್ಕೂ ಅಧಿಕ ಪವಾಡಗಳನ್ನು ನಡೆಸುತ್ತಾರೆ. ತೊಡೆಯಲ್ಲಿ ಬಗಣಿ ಗೂಟ ಬಡೆದುಕೊಳ್ಳುವುದು. ತೊಡೆಯಲ್ಲಿ ಸಲಾಖೆಯಿಂದ ರಂದ್ರಮಾಡಿಕೊಂಡು ಅದರಲ್ಲಿ ಮುಳ್ಳಿನ ಕಂಟಿ ಎಳೆಯುವುದು. ನಾಲಿಗೆಯಲ್ಲಿ ತ್ರಿಶೂಲ ಚುಚ್ಚಿಕೊಳ್ಳುವುದು. ಕೈಯಲ್ಲಿ ತ್ರಿಶೂಲ ಚುಚ್ಚಿಕೊಂಡು ಆರತಿ ಬೆಳಗುವುದು ಮತ್ತು ಸರಪಳಿ ಪವಾಡಗಳು ಪ್ರಮುಖವಾಗಿವೆ. ಕಾರ್ಣಿಕೋತ್ಸವ ನಡೆದ ಮಾರನೇಯ ದಿನ ಪವಾಡಗಳು ನಡೆಯುತ್ತವೆ. ಇದರೊಂದಿಗೆ ಪ್ರಸ್ತುತ ವರ್ಷದ ಮೈಲಾರಲಿಂಗೇಶ್ವರ ಜಾತ್ರೆಗೆ ಪೂರ್ಣ ವಿರಾಮ ಬೀಳುತ್ತದೆ ಎಂದು ವೆಂಕಪಯ್ಯ ಒಡೆಯರ್ ಮಾಹಿತಿ ನೀಡಿದರು.
ಇದನ್ನೂ ಓದಿ: ತೆಲಂಗಾಣದಲ್ಲಿ ಸಮ್ಮಕ್ಕ - ಸರಳಮ್ಮ ಜಾತ್ರಾ ವೈಭವ: ದೇವತೆಗಳ ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತರ ದಂಡು