ತುಮಕೂರು: ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಇಂದು ಮಧ್ಯಾಹ್ನ ಸ್ಫೋಟ ಸಂಭವಿಸಿದೆ. ಈ ಸ್ಫೋಟ ಯಾವ ರೀತಿ ಆಯ್ತು, ಹೇಗೆ ಮಾಡಿದ್ದಾರೆ ಎಂಬ ಬಗ್ಗೆ ಸ್ಥಳ ಪರಿಶೀಲನೆ ಮಾಡಲಾಗುತ್ತಿದೆ. ಡಿಜಿ ಹಾಗು ನಗರ ಪೊಲೀಸ್ ಆಯುಕ್ತರು, ಎಫ್‌ಎಸ್‌ಎಲ್, ಬಾಂಬ್ ಸ್ಕ್ಯಾಡ್ ಕೂಡ ಸ್ಥಳಕ್ಕೆ ಹೋಗಿದೆ. ಸ್ಥಳದಲ್ಲಿ ಮಾದರಿ ಸಂಗ್ರಹಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಕುಣಿಗಲ್ನಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, 9 ಜನರಿಗೆ ಗಾಯಗಳಾಗಿವೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾರಿಗೂ ಗಂಭೀರ ಗಾಯಗಳಾಗಿಲ್ಲ. ನಾನು ಸಂಜೆ ಅಥವಾ ನಾಳೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡುತ್ತೇನೆ ಎಂದರು.
ಒಂದು ವೇಳೆ ಕುರುಹುಗಳು ಸಿಕ್ಕಲ್ಲಿ ಮುಂದಿನ ತನಿಖೆ ನಡೆಯುತ್ತಿದೆ. ಹೇಳಿಕೆಗಳು ಬಂದಿವೆ ಅಷ್ಟೇ. ಐಇಡಿ ಅಂತಾ ಹೇಳ್ತಿದ್ದಾರೆ, ಆದರೆ ಖಚಿತತೆ ಇಲ್ಲ. ಬ್ಯಾಗ್ ಇತ್ತು ಅಂತಿದ್ದಾರೆ. ನಿರ್ದಿಷ್ಟ ಮಾಹಿತಿ ಇನ್ನಷ್ಟೇ ಬರಬೇಕು ಎಂದು ಹೇಳಿದರು.
ಇಲಾಖೆ ವರದಿ ಬರುವವರೆಗೂ ಏನೂ ಹೇಳಲು ಸಾಧ್ಯವಿಲ್ಲ: ಸ್ಫೋಟದ ಕುರಿತು ನಿರ್ದಿಷ್ಟ ಮಾಹಿತಿ ನಮ್ಮ ಇಲಾಖೆಯಿಂದ ಬರಬೇಕಿದೆ. ಇಂತಹ ವಿಚಾರದಲ್ಲಿ ಊಹೆಗಳನ್ನು ಮಾಡುವುದು ತಪ್ಪು ಎಂದರು.
ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ: ''ತಮ್ಮ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಎಲ್ಲಾ ವಿಡಿಯೋಗಳಿವೆ. ಸದ್ಯಕ್ಕೆ ಯಾರಿಗೂ ಏನೂ ತೊಂದರೆ ಆಗಿಲ್ಲ. ಬೆಂಗಳೂರಿನಲ್ಲಿ ಯಾರೂ ಆತಂಕಪಡುವುದು ಬೇಡ. ಕಾನೂನು ಸುವ್ಯವಸ್ಥೆಯನ್ನು ನಾವು ಸುಲಲಿತವಾಗಿ ನೋಡಿಕೊಳ್ಳುತ್ತಿದ್ದೇವೆ. ಕೆಲವರು ಏನೋ ಪ್ರಯತ್ನ ಮಾಡುತ್ತಿರುತ್ತಾರೆ'' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಇದನ್ನೂ ಓದಿ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ: 9 ಮಂದಿಗೆ ಗಾಯ, ತನಿಖಾ ತಂಡಗಳಿಂದ ಪರಿಶೀಲನೆ