ಮೈಸೂರು : ಸುತ್ತೂರು ಮಠವು ನಿಸ್ವಾರ್ಥ ಸೇವೆ ಮೂಲಕ ಲಕ್ಷಾಂತರ ಜನರು ಪ್ರಕಾಶಮಾನರಾಗಲು ಕಾರಣವಾಗಿದೆ. ಇದು ನಿರಂತರವಾಗಿ ಪರೋಪಕಾರದ ಕೇಂದ್ರವಾಗಿ ಹೊರಹೊಮ್ಮಿದೆ. ಬಿಜೆಪಿ ಈ ಸೇವೆಯನ್ನು ಗುರುತಿಸಿ ವಂದಿಸಲು ಬಯಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದರು.
ಭಾನುವಾರ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಸೇರಿದ ಜನಸ್ತೋಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಠದ 24 ಮಠಾಧೀಶರು ಇಲ್ಲಿ ನಿಸ್ವಾರ್ಥ ಸೇವೆ ಮಾಡಿದ್ದಾರೆ ಎಂದರು. ಸುತ್ತೂರು ಮಠದ ಜಗದ್ಗುರುಗಳ ಆಶೀರ್ವಾದ ಕೋರಿ ಅವರು ಭಾಷಣ ಆರಂಭಿಸಿದರು. ಬಸವಣ್ಣ ಕೇವಲ ಒಂದು ವರ್ಗಕ್ಕೆ ಸೀಮಿತರಲ್ಲ; ದೇಶದ ಕೋಟ್ಯಂತರ ಜನರಿಗೆ ಪ್ರೇರಣೆ ತುಂಬಿದ ಮಹಾಪುರುಷರು ಎಂದು ವಿಶ್ಲೇಷಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ. ವೈ ವಿಜಯೇಂದ್ರ ಅವರು ಮಾತನಾಡಿ, ಇಲ್ಲಿನ ಶ್ರೀಗಳು ಯಡಿಯೂರಪ್ಪ ಅವರಿಗೆ ಮಾರ್ಗದರ್ಶನ ನೀಡಿದವರು. ಶ್ರೀಗಳ ಆಶೀರ್ವಾದದಿಂದ ಉತ್ತಮ ಮಳೆ, ಬೆಳೆ ಆಗಿ ರೈತರು ನೆಮ್ಮದಿಯಿಂದ ಬಾಳಿ ಬದುಕುವಂತಾಗಲಿ ಎಂದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿಪಕ್ಷ ನಾಯಕ ಆರ್. ಅಶೋಕ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.
ಇದನ್ನೂ ಓದಿ : ನಸುಕಿನ ಜಾವ ಮೈಸೂರಿಗೆ ಬಂದಿಳಿದ ಗೃಹ ಸಚಿವ ಅಮಿತ್ ಶಾ