ಹುಬ್ಬಳ್ಳಿ: "ಮಹಿಳೆಯರಿಗೆ ಅನ್ಯಾಯ ಮಾಡುವವರ ಜೊತೆಗೆ ಬಿಜೆಪಿ ಇರಲ್ಲ. ಮೈತ್ರಿಯಾದ ಬಳಿಕ ಪ್ರಜ್ವಲ್ ರೇವಣ್ಣ ಪ್ರಕರಣ ಬೆಳಕಿಗೆ ಬಂದಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರೇ, ಕರ್ನಾಟಕದಲ್ಲಿ ನಿಮ್ಮದೇ ಸರ್ಕಾರ ಇದೆ. ನೀವು ಕಠಿಣ ಕ್ರಮ ತೆಗೆದುಕೊಳ್ಳಬೇಕಿತ್ತು. ಒಕ್ಕಲಿಗ ಬೆಲ್ಟ್‌ನಲ್ಲಿ ಚುನಾವಣೆ ಆಗುವವರೆಗೂ ನೀವು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ರಾಜಕೀಯ ಮಾಡಿದ್ದೀರಿ. ಆರೋಪಿಯನ್ನು ವಿದೇಶಕ್ಕೆ ಹೋಗಲು ಬಿಟ್ಟಿದ್ದೀರಿ. ಧೈರ್ಯವಿದ್ದರೆ ಸತ್ಯವನ್ನು ಜನರ ಮುಂದೆ ಹೇಳಿ. ಇಂತಹ ಕೃತ್ಯ ಮಾಡುವವರಿಗೆ ಕಠೋರ ಶಿಕ್ಷೆ ಆಗಬೇಕು" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕ ಪ್ರವಾಸದಲ್ಲಿರುವ ಅಮಿತ್ ಶಾ ಹುಬ್ಬಳ್ಳಿಯಲ್ಲಿಂದು ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಇತ್ತೀಚೆಗೆ ಫಯಾಜ್ ಎಂಬಾತನಿಂದ ಕೊಲೆಯಾದ ನೇಹಾ ಪ್ರಕರಣ ಪ್ರಸ್ತಾಪಿಸಿದ ಶಾ, "ಏ.18ರಂದು ನೇಹಾ ಹಿರೇಮಠ ಹತ್ಯೆಯಾಯಿತು. ಇದು ವೈಯಕ್ತಿಕ ಎಂದು ಕಾಂಗ್ರೆಸ್ ನಾಯಕರು ಹೇಳಿದರು. ನಿಮಗೆ ಆಗದಿದ್ದರೆ ಬಿಡಿ, ನಾವು ಕರ್ನಾಟಕವನ್ನು ಸುರಕ್ಷಿತವನ್ನಾಗಿ ಮಾಡುತ್ತೇವೆ. ಕರ್ನಾಟಕದ ಹೆಣ್ಣು ಮಕ್ಕಳಿಗೆ ನಾವು ಸುರಕ್ಷೆ ನೀಡುತ್ತೇವೆ" ಎಂದು ಸವಾಲೆಸೆದರು.
"ವೋಟ್ ಬ್ಯಾಂಕ್ಗಾಗಿ ಕಾಂಗ್ರೆಸ್ ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಮುಖ್ಯಮಂತ್ರಿ ಬರದ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನೀತಿ ಸಂಹಿತೆ ಜಾರಿಯಾಗಿದ್ದಕ್ಕೆ ಬರ ಪರಿಹಾರ ವಿಳಂಬವಾಗಿದೆ ಅನ್ನೋದು ಗೊತ್ತಿರುವ ವಿಚಾರ. ಈಗ ಹಣ ಬಿಡುಗಡೆಯಾಗಿದೆ. ಕಾಂಗ್ರೆಸ್ ಕೇಂದ್ರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ" ಎಂದು ಹೇಳಿದರು.
"ಕಾಂಗ್ರೆಸ್ ವೋಟ್ ಬ್ಯಾಂಕ್ ಕಾರಣಕ್ಕೆ ರಾಮ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೂ ಬರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು 10 ವರ್ಷದಲ್ಲಿ ಕಾಂಗ್ರೆಸ್ನ ತುಷ್ಟೀಕರಣ ರಾಜಕೀಯವನ್ನು ಕಿತ್ತು ಹಾಕಿದ್ದಾರೆ" ಎಂದರು.
ಇದೇ ವೇಳೆ, "ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೋಶಿಯವರನ್ನು ನೀವು ದೆಹಲಿಗೆ ಕಳುಹಿಸಿ. ಅವರನ್ನು ನಾವು ದೊಡ್ಡವರನ್ನಾಗಿ ಮಾಡುತ್ತೇವೆ. ಜೋಶಿ ನೋಡಲು ಸೀದಾ ಸಾದಾ ಕಾಣುತ್ತಾರೆ. ಹುಬ್ಬಳ್ಳಿ-ಧಾರವಾಡದ ಅಭಿವೃದ್ಧಿ ವಿಷಯ ಬಂದಾಗ ನನ್ನ ಜೊತೆಗೂ ಜಗಳವಾಡುತ್ತಾರೆ" ಎಂದು ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು.
![ನೇಹಾ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅಮಿತ್ ಶಾ](https://etvbharatimages.akamaized.net/etvbharat/prod-images/01-05-2024/kn-hbl-05-neha-family-meet-sha-av-7208089_01052024195609_0105f_1714573569_392.jpg)
ನೇಹಾ ಕುಟುಂಬಸ್ಥರಿಂದ ಅಮಿತ್ ಶಾ ಭೇಟಿ: ಇದಾದ ಬಳಿಕ ತಮ್ಮನ್ನು ಭೇಟಿಯಾದ ನೇಹಾ ಹಿರೇಮಠ ಕುಟುಂಬದವರಿಗೆ ಅಮಿತ್ ಶಾ ಸಾಂತ್ವನ ಹೇಳಿದರು. ನೆಹರೂ ಕ್ರೀಡಾಂಗಣದ ಸಮೀಪದ ಕಚೇರಿಯಲ್ಲಿ ಕುಟುಂಬಸ್ಥರು ಸಚಿವರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದರು. ಈ ವೇಳೆ ಕೊಲೆ ಆರೋಪಿಗೆ ಆದಷ್ಟು ಬೇಗ ಕಠಿಣ ಶಿಕ್ಷೆ ಒದಗಿಸಿಕೊಡಬೇಕು ಎಂದು ಕುಟುಂಬಸ್ಥರು ಮನವಿ ಸಲ್ಲಿಸಿದರು.