ದಾವಣಗೆರೆ: ಬೇಸಿಗೆಯ ಕಾವು ಏರಿಕೆಯಾಗುತ್ತಿದ್ದಂತೆ ಬೆಣ್ಣೆನಗರಿ ದಾವಣಗೆರೆಯಲ್ಲಿ ಲೋಕಸಭಾ ಚುನಾವಣೆಯ ಕಾವು ಸಹ ಏರುತ್ತಿದೆ. ಈ ಬಾರಿ ಇಬ್ಬರು ಮಹಿಳಾ ಮಣಿಗಳ ನಡುವೆ ಈ ಚುನಾವಣಾ ಹಣಾಹಣಿಗೆ ಕಾರಣವಾಗಿದೆ. ಶಾಮನೂರು ಶಿವಶಂಕರಪ್ಪನವರ ಸೊಸೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದರೆ, ಹಾಲಿ ಸಂಸದ ಜಿಎಂ ಸಿದ್ದೇಶ್ವರ್ ಅವರ ಪತ್ನಿ ಗಾಯಿತ್ರಿ ಸಿದ್ದೇಶ್ವರ್ ಬಿಜೆಪಿಯಿಂದ ಸ್ಪರ್ಧೆಗಿಳಿದಿದ್ದಾರೆ. ಮತದಾರ ಯಾರಿಗೆ ಮಣೆ ಹಾಕಲಿದ್ದಾನೆ ಅನ್ನೋದನ್ನು ಕಾದು ನೋಡಬೇಕಿದೆ.
ದಾವಣಗೆರೆ ಕ್ಷೇತ್ರ ರಚನೆಯಾದಾಗಿನಿಂದ ಈ ತನಕ ಒಟ್ಟು 12 ಚುನಾವಣೆಗಳು ನಡೆದಿದ್ದು, ಇದು 13ನೇ ಸಾರ್ವತ್ರಿಕ ಚುನಾವಣೆಯಾಗಿದೆ. ಈವರೆಗಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 6 ಬಾರಿ ಗೆಲುವು ದಾಖಲಿಸಿ ಸಮಬಲ ಸಾಧಿಸಿವೆ. ಈ ಬಾರಿ ಗೆದ್ದು ಮೇಲುಗೈ ಸಾಧಿಸುವತ್ತ ಉಭಯ ಪಕ್ಷಗಳ ಚಿತ್ತ ನೆಟ್ಟಿದೆ.
ಸಾರ್ವತ್ರಿಕ ಚುನಾವಣೆ ಇತಿಹಾಸ: 1977 ರಿಂದ 2019ರ ವರೆಗೆ ಕ್ಷೇತ್ರದಲ್ಲಿ ಒಟ್ಟು 12 ಸಾರ್ವತ್ರಿಕ ಚುನಾವಣೆಗಳು ನಡೆದಿವೆ. 1977ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಕೊಂಡಜ್ಜಿ ಬಸಪ್ಪ ಮೊಟ್ಟಮೊದಲ ಬಾರಿಗೆ ಗೆದ್ದು ಬೀಗಿದರು. ಪ್ರಮುಖ ರಾಜಕೀಯ ಪಕ್ಷಗಳಾದ ಕೈ ಮತ್ತು ಕಮಲ ತಲಾ 6 ಬಾರಿ ಗೆಲುವು ಸಾಧಿಸಿಕೊಂಡು ಬಂದಿವೆ. ಕಾಂಗ್ರೆಸ್ನಿಂದ ಕೊಂಡಜ್ಜಿ ಬಸಪ್ಪ ಮತ್ತು ಟಿವಿ ಚಂದ್ರಶೇಖರಪ್ಪ ಕ್ರಮವಾಗಿ 1 ಬಾರಿ, ಚನ್ನಯ್ಯ ಒಡೆಯರ್ 3 ಬಾರಿ, ಶಾಮನೂರು ಶಿವಶಂಕರಪ್ಪ 1 ಬಾರಿ ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ಜಿ. ಮಲ್ಲಿಕಾರ್ಜುನಪ್ಪ 2 ಬಾರಿ, ಜಿಎಂ ಸಿದ್ದೇಶ್ವರ್ 4 ಬಾರಿ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. 1998ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಮಲ್ಲಿಕಾರ್ಜುನಪ್ಪ, ಕಾಂಗ್ರೆಸ್ ಪ್ರತಿಸ್ಪರ್ಧಿಯಾಗಿದ್ದ ಶಾಮನೂರು ಶಿವಶಂಕರಪ್ಪ ವಿರುದ್ಧ ಪರಭಾವಗೊಂಡಿದ್ದರು.
ಅಭ್ಯರ್ಥಿಗಳು ಪಡೆದ ಮತಗಳೆಷ್ಟು: 2004ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಜಿಎಂ ಸಿದ್ದೇಶ್ವರ್ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಎಸ್ ಎಸ್ ಮಲ್ಲಿಕಾರ್ಜುನ್ ಸೋಲು ಕಂಡಿದ್ದರು. 32,676 ಮತಗಳ ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. 2009ರಲ್ಲಿ ಜಿಎಂ ಸಿದ್ದೇಶ್ವರ್ ಎರಡನೇ ಬಾರಿ ಆಯ್ಕೆ ಆದರು. ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ನ ಎಸ್ ಎಸ್ ಮಲ್ಲಿಕಾರ್ಜುನ್ ಮತ್ತೆ ಸೋಲು ಕಾಣಬೇಕಾಯಿತು. ಕೇವಲ 2024 ಮತಗಳ ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.
2014ರ ಲೋಕ ಚುನಾವಣೆಯಲ್ಲಿ ಬಿಜೆಪಿಯಿಂದ ಜಿಎಂ ಸಿದ್ದೇಶ್ವರ್ ಮೂರನೇ ಬಾರಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದರೆ, ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ ಎಸ್ ಎಸ್ ಮಲ್ಲಿಕಾರ್ಜುನ್ ಮತ್ತೆ ಸೋಲುಂಡರು. ಈ ಚುನಾವಣೆಯಲ್ಲಿ 17,607 ಮತಗಳ ಅಂತರದಲ್ಲಿ ಬಿಜೆಪಿ ಗೆಲುವು ಕಂಡಿತ್ತು. 2019ರಲ್ಲಿ ಮತ್ತೆ ಬಿಜೆಪಿಯಿಂದ ಜಿಎಂ ಸಿದ್ದೇಶ್ವರ್ ಕಾಂಗ್ರೆಸ್ ಅಭ್ಯರ್ಥಿ ಹೆಚ್ ಬಿ ಮಂಜಪ್ಪ ವಿರುದ್ಧ ನಾಲ್ಕನೇ ಬಾರಿ ಗೆಲುವು ಸಾಧಿಸಿದ್ದರು. 1,69,702 ಲಕ್ಷ ಮತಗಳ ಭಾರೀ ಅಂತರಿಂದ ಬಿಜೆಪಿ ಗೆದ್ದು ಬೀಗಿತ್ತು.
ಮತ್ತೆ ಗೆಲುವಿನ ಮೇಲೆ ಕಣ್ಣಿಟ್ಟಿರುವ ಸಿದ್ದೇಶ್ವರ್ ಕುಟುಂಬಕ್ಕೆ ಶಾಮನೂರು ಕುಟುಂಬ ಪ್ರಬಲ ಎದುರಾಳಿ ಆಗಿದೆ. ಆದ್ದರಿಂದ ಈ ಬಾರಿಯ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಎರಡೂ ಕುಟುಂಬಗಳಿಂದಲೂ ಈ ಬಾರಿ ಮಹಿಳೆಯರೇ ಅಖಾಡಕ್ಕೆ ಇಳಿದಿರುವುದು ಚುನಾವಣೆಯನ್ನು ಮತ್ತಷ್ಟು ರಂಗೇರಿಸಿದೆ.
8 ವಿಧಾನಸಭಾ ಕ್ಷೇತ್ರದ ಮಾಹಿತಿ: ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಹರಿಹರ, ಜಗಳೂರು, ಚನ್ನಗಿರಿ, ಮಾಯಕೊಂಡ, ಹೊನ್ನಾಳಿ, ಹರಪನಹಳ್ಳಿ ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. 8 ವಿಧಾನಸಭಾ ಕ್ಷೇತ್ರಗಳ ಪೈಕಿ ಒಟ್ಟು 16,79,746 ಮತದಾರರಿದ್ದಾರೆ. 84,0340 ಮಹಿಳಾ ಮತದಾರರೇ ಹೆಚ್ಚಿದ್ದಾರೆ. 83,8,705ರಷ್ಟು ಪುರುಷ ಮತದಾರರಿದ್ದರೆ, 136 ಇತರೆ ಮತದಾರರಿದ್ದಾರೆ.
ಯುವ ಮತದಾರರ ಮಾಹಿತಿ: ಜಿಲ್ಲೆಯಲ್ಲಿ ಒಟ್ಟು 36,849 ಯುವ ಮತದಾರರಿದ್ದಾರೆ. 19,507 ಯುವ ಪುರುಷರು, 17,339 ಯುವ ಮಹಿಳಾ ಮತದಾರರಿದ್ದಾರೆ. 03 ಇತರೆ ಮತದಾರರಿದ್ದಾರೆ. ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಯುವ ಮತದಾರರಿರುವುದು ವಿಶೇಷ. 2,966 ಪುರುಷ ಯುವ ಮತದಾರರಿದ್ದು, 2,524 ಮಹಿಳಾ ಯುವ ಮತದಾರರಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅತಿ ಕಡಿಮೆ ಯುವ ಮತದಾರರಿದ್ದಾರೆ. 2,069 ಪುರುಷ, 1919 ಮಹಿಳಾ ಮತದಾರರಿದ್ದಾರೆ.
ಕ್ಷೇತ್ರದಲ್ಲಿ ಉಭಯ ಪಕ್ಷಗಳ ಬಲಾಬಲ: ದಾವಣಗೆರೆ ದಕ್ಷಿಣ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ, ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಎಸ್ ಎಸ್ ಮಲ್ಲಿಕಾರ್ಜುನ ಕಾಂಗ್ರೆಸ್ ಶಾಸಕರಿದ್ದು, ಜಗಳೂರು ಕ್ಷೇತ್ರದಿಂದ ಬಿ. ದೇವೇಂದ್ರಪ್ಪ, ಹೊನ್ನಾಳಿಯಿಂದ ಡಿಜಿ ಶಾಂತನಗೌಡ, ಮಾಯಕೊಂಡದಿಂದ ಕೆಎಸ್ ಬಸವಂತಪ್ಪ, ಚನ್ನಗಿರಿ ಕ್ಷೇತ್ರದಲ್ಲಿ ಶಿವಗಂಗಾ ಬಸವರಾಜ್, ಇನ್ನು ಹರಪನಹಳ್ಳಿಯಲ್ಲಿ ಪಕ್ಷೇತರವಾಗಿ ಗೆದ್ದ ಎಂಪಿ ಲತಾ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಹರಿಹರ ಕ್ಷೇತ್ರದ ಬಿಪಿ ಹರೀಶ್ ಹೊರತು 8 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಕೈ ಶಾಸಕರೇ ಇರುವುದು ಕಾಂಗ್ರೆಸ್ಗೆ ಪ್ಲಸ್ ಪಾಯಿಂಟ್ ಆಗಿದೆ. ಸ್ಮಾರ್ಟ್ ಸಿಟಿ ಯೋಜನೆಯಿಂದಾದ ಅಭಿವೃದ್ಧಿ ಕಾಮಗಾರಿಗಳು, ಮೋದಿ ಅಲೆ, ಲಿಂಗಾಯತ ಮತಗಳ ಕ್ರೋಢೀಕರಣ, ಸತತ ನಾಲ್ಕು ಬಾರಿ ಗೆದ್ದಿರುವ ಜಿಎಂ ಸಿದ್ದೇಶ್ವರ್ ಅವರು ಬಿಜೆಪಿಗೆ ಪ್ಲಸ್ ಆಗಬಹುದು ಅನ್ನೋದು ವಿಶ್ಲೇಷಕರ ಮಾತು.
ಇದನ್ನೂ ಓದಿ: ದಾವಣಗೆರೆಯಲ್ಲಿ ಸಿದ್ದೇಶ್ವರ್ - ಶಾಮನೂರು ಕುಟುಂಬದ ನಡುವೆ ನೇರ ಸ್ಪರ್ಧೆ: ದಾಖಲೆಯ ಗೆಲುವಿನತ್ತ ಕಾಂಗ್ರೆಸ್, ಬಿಜೆಪಿ ಚಿತ್ತ!