ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಐತಿಹಾಸಿಕ ದೇವರಗುಡ್ಡ ಮಾಲತೇಶ್ ಸ್ವಾಮಿ ಕಾರ್ಣಿಕ ಶುಕ್ರವಾರ ಸಂಜೆ ನಡೆಯಿತು. 'ಆಕಾಶದತ್ತ ಚಿಗರಿತಲೇ, ಬೇರೆಲ್ಲ ಮುದ್ದಾಯಿತಲೇ ಪರಾಕ್' ಎಂದು ಗೊರವಯ್ಯ ಕಾರ್ಣಿಕ ನುಡಿದರು.
21 ಅಡಿ ಬಿಲ್ಲನ್ನೇರಿದ ಗೊರವಯ್ಯ ನಾಗಪ್ಪಜ್ಜಾ ಉರ್ಮಿ ಸಾವಿರಾರು ಭಕ್ತರೆದುರು ಕಾರ್ಣಿಕ ನುಡಿದ ನಂತರ ಬಿಲ್ಲಿನಿಂದ ಕೆಳಗೆ ಧುಮುಕಿದರು.
ಕಾರ್ಣಿಕದ ವಿಶ್ಲೇಷಣೆ: ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ಮಾತನಾಡಿ, "ಬೇರು ಮುದ್ದಾಯಿತಲೇ ಅಂದರೆ ರೈತರಿಗೆ ಒಳ್ಳೆಯ ಮಳೆ, ಬೆಳೆ ಬರುತ್ತೆ. ಅದನ್ನು ತೆಗೆದುಕೊಳ್ಳುವ ಫಲಾನುಭವಿಗಳಿಗೂ ಒಳ್ಳೆಯದಾಗುತ್ತೆ" ಎಂದರ್ಥ ಎಂದು ವಿಶ್ಲೇಷಿಸಬಹುದು ಎಂದರು.
"ರಾಜಕೀಯ ಬೆಳವಣಿಗೆಗಳ ಕುರಿತು ಹೇಳುವುದಾದರೆ, ಆಕಾಶದತ್ತ ಚಿಗರಿತಲೇ ಅಂದರೆ ಈಗಿರುವ ನಾಯಕತ್ವ ಆಕಾಶದತ್ತ ಚಿಗುರಿಬಿಟ್ಟಿದೆ. ಬೇರು ಮುದ್ದಾಯಿತಲೇ ಅಂದರೆ, ಅವರಿಗೆಲ್ಲ ಬೆನ್ನೆಲುಬಾಗಿ ನಿಂತಿರುವುದನ್ನು ನೀವೆಲ್ಲ ನೋಡಿರಬಹುದು. ಕಾನೂನು ವ್ಯವಸ್ಥೆಯಲ್ಲಿ ಏನು ಬದಲಾವಣೆಯಾದರೂ ಕೂಡ ಈಗಿರುವ ನಾಯಕತ್ವ ಹೇಳಿದಂತೆ ಅವರು ಒಪ್ಪಿಕೊಳ್ತಾರೆ" ಎಂದು ವಿವರಿಸಿದರು.
"ಬೇರುಗಳೆಲ್ಲಾ ಮುದ್ದಾಯಿತಲೇ ಅಂದರೆ, ಆಕಾಶದತ್ತ ಚಿಗುರಿರೋ ಗಿಡ ಹೇಳಿದಂಗೆ ಬೇರುಗಳು ಒಪ್ಪಿಕೊಳ್ತವೆ ಅಂತ ಅರ್ಥ" ಎಂದು ಭಟ್ ಹೇಳಿದ್ದಾರೆ.
ದೇವಸ್ಥಾನದ ಟ್ರಸ್ಟಿ ಎಂ.ಎಂ.ಸಥಗಿ ಮಾತನಾಡಿ, "ಕಾರ್ಣಿಕ ಎಂಬುದು ಒಂದು ಭವಿಷ್ಯ. ಆಕಾಶ ಚಿಗುರಿತ್ತಲೆ, ಬೇರೆಲ್ಲ ಮುದ್ದಾಯಿತಲೇ ಪರಾಕ್ ಎಂಬುದು ಈ ಬಾರಿಯ ಕಾರ್ಣಿಕ. ಆಕಾಶ ಎಂದರೆ ಮಳೆ, ಬೇರು ಎಂದರೆ ಬೆಳೆ. ಮಳೆ ಬೆಳೆ ಚೆನ್ನಾಗಿ ಆದ್ರೆ ಸಮೃದ್ಧಿ ಎಂಬುದು ಇದರ ಅರ್ಥ" ಎಂದರು.
ಇದನ್ನೂ ಓದಿ: "ಸಂಪಾಯಿತಲೇ ಪರಾಕ್".. ರೈತರಿಗೆ ಈ ಬಾರಿ ಸಂತಸ ತಂದ ಮೈಲಾರ ಲಿಂಗೇಶ್ವರ ಕಾರ್ಣಿಕ