ಹಾವೇರಿ: ಜಿಲ್ಲೆಯ ಶಿಗ್ಗಾವಿ ಪಟ್ಟಣದ ಬಳಿ ಶನಿವಾರ ನಡೆದ ಕಾರು ಅಪಘಾತಕ್ಕೆ 'ಅತಿಯಾದ ವೇಗ ಹಾಗೂ ಚಾಲಕನ ನಿರ್ಲಕ್ಷ್ಯವೇ ಕಾರಣ' ಎಂದು ಹಾವೇರಿ ಹೆಚ್ಚುವರಿ ಎಸ್ಪಿ ಗೋಪಾಲ್ ಸಿ. ತಿಳಿಸಿದ್ದಾರೆ.
ಹಾವೇರಿಯಲ್ಲಿ ಈ ಬಗ್ಗೆ ಶನಿವಾರ ಮಾತನಾಡಿ, 'ಕಾರು ಚಾಲಕ ಅತಿವೇಗದಿಂದ ಓವರಟೇಕ್ ಮಾಡಲು ಹೋಗಿದ್ದ. ಇದರಿಂದ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಉತ್ತಮ ರಸ್ತೆ ಕಾಣಿಸುತ್ತಿದ್ದಂತೆ ವಾಹನ ಸವಾರರು ವೇಗ ಅಧಿಕಗೊಳಿಸುತ್ತಾರೆ. ಆ ರೀತಿ ಮಾಡದೆ ಕಡಿಮೆ ವೇಗದಲ್ಲಿ ವಾಹನ ಚಾಲನೆ ಮಾಡುವಂತೆ' ಹೆಚ್ಚುವರಿ ಎಸ್ಪಿ ಮನವಿ ಮಾಡಿದರು.
ಮೃತರು ಸವಣೂರು ತಾಲೂಕು ಬೇವಿನಹಳ್ಳಿ ಗ್ರಾಮದವರು. 7 ಜನ ಸೇರಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಂದಗಡಕ್ಕೆ ಹೊರಟಿದ್ದರು. ಮುಂಜಾನೆ 6:30 ಗಂಟೆ ಸುಮಾರಿಗೆ ಅಪಘಾತವಾಗಿದೆ ಎಂದು ಎಎಸ್ಪಿ ತಿಳಿಸಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾವಿ ಪಟ್ಟಣದ ಹತ್ತಿರ ಶನಿವಾರ ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದರು. ಚಾಲಕನ ನಿಯಂತ್ರಣ ತಪ್ಪಿ ಕಾರು ಬೇವಿನ ಮರಕ್ಕೆ ಡಿಕ್ಕಿ ಹೊಡೆದಿತ್ತು. ಸ್ಥಳದಲ್ಲಿಯೇ 23 ವರ್ಷದ ನೀಲಪ್ಪ ಮೂಲಿಮನಿ ಸಾವನ್ನಪ್ಪಿದ್ದರು. ಸುದೀಪ್ ಕೋಟಿ ಶಿಗ್ಗಾಂವ್ ಎಂಬವರು ತಾಲೂಕಾಸ್ಪತ್ರೆಯಲ್ಲಿ ಮೃತರಾದರೆ, ಬಳಿಕ ಚಿಕಿತ್ಸೆಗೆ ಸ್ಪಂದಿಸದೆ, ಶಿವನಗೌಡ ಯಲ್ಲನಗೌಡ್ರ (20) ಹಾಗೂ ಕಲ್ಮೇಶ ಮಾನೋಜಿ (26) ಎಂಬವರು ಕೊನೆಯುಸಿರೆಳೆದಿದ್ದರು.
ಇದನ್ನೂ ಓದಿ: ಹಾವೇರಿ: ಮರಕ್ಕೆ ಡಿಕ್ಕಿ ಹೊಡೆದ ಕಾರು; ನಾಲ್ವರು ಯುವಕರ ಸಾವು