ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಜಮ್ಮಾ ಬಾಣೆ ಜಮೀನಿನ ಸಂಪೂರ್ಣ ಹಕ್ಕನ್ನು ಕೊಡವರಿಗೆ ನೀಡುವ ಕರ್ನಾಟಕ ಭೂ ಕಂದಾಯ ಕಾಯ್ದೆಗೆ 2011ರ ಸೆಕ್ಷನ್ 20(2)ರ ತಿದ್ದುಪಡಿಯ ಕಾನೂನು ಸಿಂಧುತ್ವವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಅಲ್ಲದೆ, ಕಾಯ್ದೆಯ ತಿದ್ದಪಡಿ ಕೊಡವ ಕುಟುಂಬ ವ್ಯವಸ್ಥೆ ಅಥವಾ ಸಂಪ್ರದಾಯಗಳಿಗೆ ವಿರುದ್ಧವಾಗಿಲ್ಲ. ಬದಲಾಗಿ ಕೊಡಗು ಜಿಲ್ಲೆಯಲ್ಲಿನ ಜಮ್ಮಾಬಾಣೆ ಭೂಮಿಯ ಮೇಲೆ ಸಂಪೂರ್ಣ ಮಾಲೀಕತ್ವದ ಹಕ್ಕುಗಳು ಕೊಡವರಿಗೆ ಲಭ್ಯವಾಗಲಿವೆ ಎಂದು ಪೀಠ ತಿಳಿಸಿದೆ.
ಕರ್ನಾಟಕ ಭೂ ಕಂದಾಯ ಕಾಯ್ದೆ ಸೆಕ್ಷನ್ 2 ಮತ್ತು 80ಕ್ಕೆ ತಿದ್ದುಪಡಿ ಮಾಡಿರುವ ಸಾಂವಿಧಾನಿಕ ಸಿಂದುತ್ವವ್ವನ್ನು ಪ್ರಶ್ನಿಸಿ ಬ್ರಿಗೇಡಿಯರ್ ಮಾಳೇಟಿರ ಎ. ದೇವುಯ್ಯ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ, ಕಾಯ್ದೆಯಲ್ಲಿ ತಿದ್ದುಪಡಿ ಮಾಡಿರುವುದಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ತಿಳಿಸಿ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಅಲ್ಲದೆ, ಈ ತಿದ್ದುಪಡಿಯಿಂದ ಕೊಡಗು ಜಿಲ್ಲೆಯಲ್ಲಿ ಸರ್ಕಾರದ ಅಧೀನದಲ್ಲಿದ್ದ ಜಮ್ಮಾ ಬಾಣೆ ಭೂಮಿಗೆ ಕೊಡವ ಕುಟುಂಬಕ್ಕೆ ಸೇರಿದ ಎಲ್ಲ ಸದಸ್ಯರ ಮಾಲೀಕತ್ವವನ್ನು ಪಡೆದುಕೊಳ್ಳಲಿದ್ದಾರೆ. ಜೊತೆಗೆ, ಆರ್‌ಟಿಸಿಯ ಕಲಂ 9ರಲ್ಲಿ ಕುಟುಂಬದ ಎಲ್ಲ ಸದಸ್ಯರ ಹೆಸರನ್ನು ನಮೂದಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಪೀಠ ತಿಳಿಸಿದೆ.
ಜಮ್ಮಾ ಬಾಣೆ ಜಮೀನುಗಳ ಸಂಬಂಧಿಸಿದಂತೆ ಕೊಡವ ಕುಟುಂಬದ ಸದಸ್ಯರು ತಮ್ಮ ಆಸ್ತಿಯನ್ನು ಮೂರನೇ ವ್ಯಕ್ತಿಗೆ ಪರಭಾರೆ ಮಾಡಲು ನಿರ್ಬಂಧವಿದೆ. ಇದೀಗ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ಕೊಡವ ಕುಟುಂಬ ವ್ಯವಸ್ಥೆ ಮತ್ತು ಅವಿಭಕ್ತ ಕುಟುಂಬ ಪದ್ದತಿಗಳು ಮತ್ತು ಸಂಪ್ರದಾಯಗಳಿಗೆ ಅಡ್ಡಿಯಾಗಲಿದೆ ಎಂಬ ಅರ್ಜಿದಾರರ ವಾದವನ್ನು ತಳ್ಳಿಹಾಕಿದ ನ್ಯಾಯಪೀಠ, ಜಮ್ಮಾ ಬಾಣೆ ಭೂಮಿಯನ್ನು ಭೂ ಹಿಡುವಳಿ ಪದ್ಧತಿಯ ಆಧಾರದ ಮೇಲೆ ವರ್ಗೀಕರಿಸಲಾಗಿದೆ. ಕೊಡವರ ಪದ್ದತಿ ಅಥಾವ ಬಳಕೆ ಆಧಾರದಲ್ಲಿ ಅಲ್ಲ. ಕೊಡವ ಕುಟುಂಬದ ಆಸ್ತಿ ಪರಭಾರೆ ಅಥಾವ ವಿಭಜನೆಯನ್ನು ನಿಷೇಧಿಸುವ ಪದ್ಧತಿ ಅಥವಾ ಸಂಪ್ರದಾಯ ಜಾರಿ ಮಾಡಿಲ್ಲ ಎಂದು ಪೀಠ ತಿಳಿಸಿದೆ.
ಅಲ್ಲದೆ, ತಿದ್ದುಪಡಿಯಿಂದ ಜಮ್ಮಾ ಬಾಣೆ ಜಮೀನಿಗೆ ಕೊಡವ ಕುಟುಂಬದ ಎಲ್ಲ ಸದಸ್ಯರನ್ನು ಭೂ ದಾಖಲೆಗಳಲ್ಲಿ ನೊಂದಾಯಿಸಬಹುದಾಗಿದೆ. ಜೊತೆಗೆ, ಈ ಹಿಂದೆ ಜಮ್ಮಾಬಾಣೆ ಜಮೀನು ಮತ್ತು ಅದರಲ್ಲಿನ ಮರಗಳ ಹಕ್ಕುಗಳು ಸರ್ಕಾರದ ಅಧೀನದಲ್ಲಿತ್ತು. ಇದೀಗ ಕೊಡವ ಕುಟುಂಬಕ್ಕೆ ಎಲ್ಲ ಹಕ್ಕುಗಳು ಸಿಗಲಿದೆ ಎಂದು ಪೀಠ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಕಾಯ್ದೆಯ ತಿದ್ದು ಅವಿಭಕ್ತ ಕುಟುಂಬ ಆಸ್ತಿಯನ್ನು ಪರಭಾರೆ ಮಾಡದಂತೆ ಕೊಡವರ ಸಾಂಪ್ರದಾಯಿಕ ಕಾನೂನು ನಿರ್ಬಂಧಿಸುತ್ತದೆ ಮತ್ತು ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ಕುಟುಂಬದ ಯಾವುದೇ ಸದಸ್ಯರಿಗೆ ವೈಯಕ್ತಿಕ ಹಕ್ಕು ಇರುವುದಿಲ್ಲ. ಆಕ್ಷೇಪಾರ್ಹ ತಿದ್ದುಪಡಿಯ ಮೂಲಕ ರಾಜ್ಯ ಸರ್ಕಾರ ಕೊಡವರ ಸಂಸ್ಕೃತಿಯನ್ನು ತೊಡೆದು ಹಾಕಿದೆ. ಆ ಮೂಲಕ ಸಂವಿಧಾನದ ಪರಿಚ್ಛೇದ 51ಎ(ಎಫ್)ನ್ನು ಉಲ್ಲಂಘಿಸಿದೆ'' ಎಂದು ನ್ಯಾಯಪೀಠಕ್ಕೆ ಕೋರಿದ್ದರು.