ಬೆಂಗಳೂರು: ಅಸ್ಸಾಂ ರಾಜ್ಯದ ಬುಡಕಟ್ಟು ಜನರ ಸಂಸ್ಕೃತಿ ಹಬ್ಬ (ಕರ್ಮ ಪೂಜಾ ಫೆಸ್ಟಿವಲ್) ಆಚರಣೆಗೆ ಪೊಲೀಸರು ನೀಡಿದ್ದ ಅನುಮತಿ ರದ್ದುಗೊಳಿಸಿದ ಪರಿಣಾಮ ಗೊಂದಲದ ವಾತಾವರಣ ಸೃಷ್ಟಿಯಾಯಿತು. ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಜಾಪುರ ರಸ್ತೆಯ ಕಾಲೇಜು ಮೈದಾನದಲ್ಲಿ ಭಾನುವಾರ ಘಟನೆ ನಡೆದಿದ್ದು, ಕಾರ್ಯಕ್ರಮ ಆಯೋಜಕರ ಸಹಿತ 15 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಅಸ್ಸಾಂ ರಾಜ್ಯದ ಬುಡಕಟ್ಟು ಜನರ ಸಂಸ್ಕೃತಿ ಹಬ್ಬವಾದ ಕರ್ಮ ಪೂಜಾ ಪ್ರಯುಕ್ತ ಕಾರ್ಯಕ್ರಮ ಆಚರಣೆಗಾಗಿ ಆಯೋಜಕರು ಅನುಮತಿ ಪಡೆದಿದ್ದರು. ಸುಮಾರು 500ರಿಂದ ಸಾವಿರ ಜನರು ಸೇರಬಹುದೆಂಬ ನಿರೀಕ್ಷೆಯಿಂದ ಆಯೋಜಕರು ಅನುಮತಿ ಪಡೆದುಕೊಂಡಿದ್ದರು. ಆದರೆ ನಿರೀಕ್ಷೆಗೂ ಮೀರಿ 2ರಿಂದ 3 ಸಾವಿರ ಜನರು ಸೇರಿದ್ದರಿಂದ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಯಿತು. ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗಬಹುದು ಎಂಬ ಸಂಭಾವ್ಯ ಸಾಧ್ಯತೆಗಳನ್ನು ಮನಗಂಡ ಪೊಲೀಸರು ಕಾರ್ಯಕ್ರಮಕ್ಕೆ ನೀಡಿದ್ದ ಅನುಮತಿ ರದ್ದುಗೊಳಿಸಿ, ಕೂಡಲೇ ನಿಲ್ಲಿಸುವಂತೆ ಆಯೋಜಕರಿಗೆ ಸೂಚಿಸಿದರು.
ಇದರಿಂದ ನಿರಾಶೆಗೊಂಡ ಜನ ಕಾರ್ಯಕ್ರಮ ಆಯೋಜನೆಯಾದ ಸ್ಥಳ ತೊರೆಯದೆ ಆಕ್ರೋಶ ವ್ಯಕ್ತಪಡಿಸಿದರು. ಕೆಲಕಾಲ ಸ್ಥಳದಲ್ಲಿ ಗೊಂದಲವುಂಟಾಯಿತು. ಬಳಿಕ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಕರೆಯಿಸಿ ಸ್ಥಳದಲ್ಲಿದ್ದ ಜನರನ್ನು ನಿಯಂತ್ರಿಸಿ ಕಳುಹಿಸಲಾಗಿದೆ.
ಕರ್ಮ ಪೂಜಾ ಕಮಿಟಿಯವರು ಕಳೆದ ಐದು ವರ್ಷಗಳಿಂದ ಪ್ರತಿ ವರ್ಷವೂ ಅದೇ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದ್ದರು. ಆದರೆ ಈ ವರ್ಷ ಕಾರ್ಯಕ್ರಮ ಆಯೋಜನೆಯಾಗಿರುವುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಮಾಹಿತಿ ಹಂಚಿಕೊಂಡಿದ್ದರಿಂದ ಹಾಗೂ ರಜಾ ದಿನವಾದ್ದರಿಂದ ಅಕ್ಕಪಕ್ಕದ ಗಡಿ ಭಾಗಗಳಲ್ಲಿ ನೆಲೆಸಿದ್ದವರೂ ಸಹ ಬಾಡಿಗೆ ವಾಹನಗಳನ್ನು ಮಾಡಿಕೊಂಡು ಕಾರ್ಯಕ್ರಮಕ್ಕೆ ಬಂದಿದ್ದರು.
ಇದರಿಂದಾಗಿ ಜನರನ್ನು ನಿಯಂತ್ರಿಸಲು ಆಯೋಜಕರಿಗೆ ಕಷ್ಟವಾಯಿತು. ಕರ್ಮ ಪೂಜಾ ಕಮಿಟಿಯ ಮುಖ್ಯಸ್ಥರಾದ ಚಿತ್ರಾ ತಾರ್ಕಿ, ಕಾರ್ಯಕ್ರಮದ ಆಯೋಜಕರು ಸೇರಿದಂತೆ ಕೆಲವರ ವಿರುದ್ಧ ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಇದನ್ನೂ ಓದಿ: ಹಿಂದೂಗಳ ಹಬ್ಬವಿದ್ದಾಗ ಮಾತ್ರ ಸರ್ಕಾರಕ್ಕೆ ಕಾನೂನುಗಳು ನೆನಪಾಗುತ್ತವೆ: ಪ್ರಮೋದ್ ಮುತಾಲಿಕ್ ಅಸಮಾಧಾನ - Pramod Muthalik