ಬೆಂಗಳೂರು: ಆಸ್ತಿ ವಿಚಾರದ ಸಂಬಂಧ ವಾಗ್ವಾದದ ವೇಳೆ ಸಹೋದರಿಯ ಮೇಲೆ ನಾಯಿ ಛೂ ಬಿಟ್ಟು ಅಕ್ರಮವಾಗಿ ಪ್ರತಿಬಂಧಿಸಿದ ಹಾಗೂ ಜೀವ ಬೆದರಿಕೆಯೊಡ್ಡಿದ ಆರೋಪದಡಿ ಮಹಿಳೆಯ ಸಹೋದರ ಮತ್ತವರ ಪತ್ನಿ ವಿರುದ್ಧ ದಾಖಲಾಗಿರುವ ದೂರಿನ ಕುರಿತು ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಪ್ರಕರಣ ಸಂಬಂಧ ಬೆಂಗಳೂರು ಎಸಿಎಂಎಂ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸುವಂತೆ ಕೋರಿ ಹಲಸೂರು ನಿವಾಸಿಗಳಾದ ಪುರುಷೋತ್ತಮ್ ಮತ್ತವರ ಪತ್ನಿ ಭಾಗ್ಯ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ಪ್ರತಿವಾದಿಗಳಾದ ಹಲಸೂರು ಠಾಣೆ ಪೊಲೀಸರು ಮತ್ತು ಪ್ರಕರಣದ ದೂರುದಾರೆ ಪುರುಷೋತ್ತಮ್ ಸಹೋದರಿ ಭುವನೇಶ್ವರಿ ಅವರಿಗೆ ಪೀಠವು ನೋಟಿಸ್ ಜಾರಿಗೊಳಿಸಿತು. ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿದೆ ಸೂಚಿಸಿ, ವಿಚಾರಣೆಯನ್ನು ಅಕ್ಟೋಬರ್ 23ಕ್ಕೆ ಮುಂದೂಡಿದ ಪೀಠ, ಮುಂದಿನ ವಿಚಾರಣೆವರೆಗೆ ಅರ್ಜಿದಾರರ ವಿರುದ್ಧ ಎಸಿಎಂಎಂ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ''ಪ್ರಕರಣದಲ್ಲಿ ಮೊದಲನೇ ಅರ್ಜಿದಾರರು ಮತ್ತು ದೂರುದಾರರು ಅಣ್ಣ-ತಂಗಿಯಾಗಿದ್ದಾರೆ. ಈ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಿ'' ಎಂದು ಸಲಹೆ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ''ಪ್ರಕರಣವು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಶಿಫಾರಸು ಆಗಿತ್ತು. ಆದರೆ, ಅದಾಲತ್‌ಗೆ ದೂರುದಾರರು ಹಾಜರಾಗಲೇ ಇಲ್ಲ'' ಎಂದು ತಿಳಿಸಿದರು.
ಪ್ರಕರಣದ ಹಿನ್ನೆಲೆ?: ಆಸ್ತಿ ವಿಚಾರವಾಗಿ ಚರ್ಚೆ ಮಾಡಲು ಮನೆಗೆ ಹೋದಾಗ ತಮ್ಮ ಮೇಲೆ ನಾಯಿಯನ್ನು ಛೂ ಬಿಟ್ಟು ಹೆದರಿಸಿದ್ದಾರೆ ಎಂದು ಆರೋಪಿಸಿ ಅರ್ಜಿದಾರರ ಮೇಲೆ ಭುವನೇಶ್ವರಿ ಅವರು 2020ರಲ್ಲಿ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಕುರಿತು ತನಿಖೆ ನಡೆಸಿದ್ದ ಪೊಲೀಸರು, ಜೀವ ಬೆದರಿಕೆ, ಅಕ್ರಮ ಪ್ರತಿಬಂಧಕ, ಮಾರಕಾಸ್ತ್ರಗಳಿಂದ ಗಾಯಗೊಳಿಸಿದ ಆರೋಪ ಸಂಬಂಧ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅರ್ಜಿದಾರರಿಗೆ ವಿಚಾರಣಾ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು. ಇದರಿಂದ, ಅರ್ಜಿದಾರರು ವಿಚಾರಣಾ ನ್ಯಾಯಾಲಯದ ಮುಂದಿರುವ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: ಹೈಕೋರ್ಟ್ ಕಲಾಪದ ವಿಡಿಯೋ ರೆಕಾರ್ಡ್ ಮಾಡದಂತೆ ಎಚ್ಚರಿಕೆ ಸಂದೇಶ - High Court