ಬೆಂಗಳೂರು: ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಬಳಸಿಕೊಂಡು ಪರಿಶಿಷ್ಟ ಜಾತಿಗೆ ಮೀಸಲಾದ ಚಿತ್ರದುರ್ಗ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸಹೋದರ ಎಂ.ಪಿ. ದಾರಕೇಶ್ವರಯ್ಯ ಅವರ ಪ್ರಯತ್ನಕ್ಕೆ ಹೈಕೋರ್ಟ್ ತಡೆ ನೀಡಿದೆ.
ದಾಸರಹಳ್ಳಿಯ ಎಂ. ಚಂದ್ರ ಬಿನ್ ಮುನಿಯಪ್ಪ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶಿಸಿದೆ. ವಿಚಾರಣೆ ವೇಳೆ ಅರ್ಜಿದಾರರ ವಕೀಲರು, ದಾರುಕೇಶಯ್ಯ ಈ ಮೊದಲು ಬೆಂಗಳೂರು ಉತ್ತರ ತಹಶೀಲ್ದಾರ್ ಅವರಿಂದ ಪಡೆದ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ರದ್ದಾಗಿತ್ತು. ಈಗ ಬೆಂಗಳೂರು ದಕ್ಷಿಣ ತಹಶೀಲ್ದಾರ್ ಅವರಿಂದ ಇದೇ ರೀತಿಯ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಇದು ಸಂಪೂರ್ಣ ಕಾನೂನು ಬಾಹಿರ ಮತ್ತು ದುರ್ಬಳಕೆ ಎಂದು ಪೀಠಕ್ಕೆ ವಿವರಿಸಿದರು.
ಇದನ್ನು ಮಾನ್ಯ ಮಾಡಿದ ನ್ಯಾಯ ಪೀಠ, ಮುಂದಿನ ವಿಚಾರಣೆವರೆಗೂ ಬೇಡ ಜಂಗಮ ಜಾತಿ ಪ್ರಮಾಣ ಪತ್ರವನ್ನು ಬಳಸದಂತೆ ದಾರುಕೇಶಯ್ಯ ಅವರಿಗೆ ನಿರ್ಬಂಧ ವಿಧಿಸಿ ಆದೇಶಿಸಿತು. ಅಲ್ಲದೆ, ಪ್ರತಿವಾದಿಗಳಾದ ಬೆಂಗಳೂರು ನಗರ ಜಿಲ್ಲಾಧಿಕಾರಿ, ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್ ಮತ್ತು ಬೆಂಗಳೂರು ದಕ್ಷಿಣ ತಾಲೂಕು ತಹಶೀಲ್ದಾರ್ಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಲಾಗಿದೆ.