ಬೆಂಗಳೂರು: ಚನ್ನಪ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ವಿರುದ್ಧ ಅವರ ಮೊದಲ ಪತ್ನಿಯ ಪುತ್ರಿ ನಿಶಾ ಯೋಗೇಶ್ವರ್ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಾನಹಾನಿಕರ ಅಥವಾ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ಹೈಕೋರ್ಟ್ ನಿರ್ಬಂಧಿಸಿದೆ.
ಈ ಸಂಬಂಧ ಸಿ.ಪಿ.ಯೋಗೇಶ್ವರ್ ಪತ್ನಿ ಪಿ.ವಿ.ಶೀಲಾ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಹೊರಡಿಸಿದೆ.
ಮನವಿಯನ್ನು ಪರಿಗಣಿಸಿರುವ ಹೈಕೋರ್ಟ್, 'ಸಾಮಾಜಿಕ ಜಾಲಾತಾಣಗಳಾದ ಇನ್‌ಸ್ಟಾಗ್ರಾಂ, ಎಕ್ಸ್ ಕಾರ್ಪ್ (ಟ್ವಿಟರ್), ಗೂಗಲ್ ಮತ್ತು ಯುಟ್ಯೂಬ್‌ಗಳಲ್ಲಿ ನಿಶಾ ಯೋಗೇಶ್ವರ್ ಅವರು ನಿಂದನಾತ್ಮಕ ಹೇಳಿಕೆಗಳನ್ನು ಅಪ್‌ಲೋಡ್ ಮಾಡಬಾರದು ಮತ್ತು ಈಗಾಗಲೇ ಪ್ರಸಾರ ಮಾಡಲಾಗಿರುವ ತುಣುಕುಗಳನ್ನು ತಡೆ ಹಿಡಿಯಬೇಕು ಎಂದು ಮಧ್ಯಂತರ ಆದೇಶ ನೀಡಿ ವಿಚಾರಣೆ ಮುಂದೂಡಿದೆ.
ತನ್ನ ಪತಿ ಸಿ.ಪಿ.ಯೋಗೇಶ್ವರ್ ಅವರು ಚುನಾವಣೆಗೆ ಸ್ಪರ್ಧಿಸಿರುವ ಬೆನ್ನಲ್ಲೇ ನಮ್ಮ ಮಲಮಗಳಾದ ನಿಶಾ ಯೋಗೇಶ್ವರ್ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಕುಟುಂಬದ ವಿರುದ್ಧ ಅವಹೇಳನಕಾರಿ, ಮಾನಹಾನಿಕಾರಕ, ಆಧಾರ ರಹಿತ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಸಂಬಂಧ ಬೆಂಗಳೂರಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅರ್ಜಿಯಲ್ಲಿ ಪಿ.ವಿ.ಶೀಲಾ ವಿವರಿಸಿದ್ದಾರೆ. ಅಲ್ಲದೇ, ತನ್ನ ಪತಿಯ ವಿರುದ್ದ ಮಾನಹಾನಿಕರ ಹೇಳಿಕೆ ನೀಡದಂತೆ ನಿರ್ದೇಶನ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಿದ್ದರು.
ಇದನ್ನೂ ಓದಿ: ನಿಶಾ ಯೋಗೇಶ್ವರ್ ಆಪಾದನೆ ಸತ್ಯಕ್ಕೆ ದೂರವಾದುದು: ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ