ಬೆಂಗಳೂರು: ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಮ್ಮ ವಿರುದ್ಧ 204 ಕೋಟಿ ರೂ. ಪರಿಹಾರ ಕೋರಿ ಹೂಡಿರುವ ವ್ಯಾಜ್ಯವನ್ನು ಬೆಂಗಳೂರು ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವಂತೆ ಕೋರಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಬಸನಗೌಡ ಪಾಟೀಲ್ ಅವರು ಸಲ್ಲಿಸಿರುವ ಸಿವಿಲ್ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಅಲ್ಲದೇ, ಅರ್ಜಿದಾರರು ವಿಚಾರಣೆಗಾಗಿ ಕನಕಪುರಕ್ಕೆ ಹೋದ ಸಂದರ್ಭದಲ್ಲಿ ಸೂಕ್ತ ರೀತಿಯ ಭದ್ರತೆ ಒದಗಿಸಬೇಕು ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿ ಅರ್ಜಿ ಇತ್ಯರ್ಥ ಪಡಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನಮ್ಮ ಕಕ್ಷಿದಾರರಿಗೆ ಕಿರುಕುಳ ನೀಡುವ ಉದ್ದೇಶದಿಂದ ಡಿ ಕೆ ಶಿವಕುಮಾರ್ ಅವರು ಕನಕಪುರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿಯಲ್ಲಿ ದಾವೆ ಹೂಡಿದ್ದಾರೆ. ತಾನು ವಿಜಯಪುರದ ಶಾಸಕನಾಗಿದ್ದು, ವಿಜಯಪುರ - ಕನಕಪುರದ ನಡುವಿನ ಅಂತರ 565 ಕಿ.ಮೀ. ಹೀಗಾಗಿ, ಪ್ರಕರಣವನ್ನು ಕನಕಪುರದಿಂದ ಬೆಂಗಳೂರಿಗೆ ವರ್ಗಾಯಿಸಬೇಕು. ತಾನು ಕನಕಪುರಕ್ಕೆ ಭೇಟಿ ನೀಡಿದರೆ ತನ್ನ ಮೇಲೆ ದಾಳಿಯಾಗುವ ಸಂಭವವಿದೆ. 2008ರಿಂದ ಡಿ ಕೆ ಶಿವಕುಮಾರ್ ಅವರು ಕನಕಪುರದ ಶಾಸಕರಾಗಿದ್ದು, ಸಾಕ್ಷಿ ತಿರುಚುವ ಸಾಧ್ಯತೆ ಇದೆ. ತಾನು ವಿಜಯಪುರದಲ್ಲಿ ಹೇಳಿಕೆ ನೀಡಿದ್ದು, ಕನಕಪುರದಲ್ಲಿ ದಾವೆ ಹೂಡಲಾಗಿದೆ. ಹೀಗಾಗಿ, ಪ್ರಕರಣವನ್ನು ಬೆಂಗಳೂರಿಗೆ ವರ್ಗಾಯಿಸಬೇಕು ಎಂದು ಶಾಸಕ ಯತ್ನಾಳ್ ಕೋರಿದ್ದಾರೆ.
ಪ್ರಕರಣದ ಹಿನ್ನೆಲೆ: ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದ ಸಂದರ್ಭದಲ್ಲಿ 2019ರ ಜೂನ್ 23ರಂದು ವಿಜಯಪುರದಲ್ಲಿ ಯತ್ನಾಳ್ ಅವರು, ಡಿ ಕೆ ಶಿವಕುಮಾರ್ ಅವರು ನಮ್ಮ (ಬಿಜೆಪಿ) ನಾಯಕರನ್ನು ಭೇಟಿ ಮಾಡಿ ತಮ್ಮ ವಿರುದ್ಧದ ಆದಾಯ ತೆರಿಗೆ ಇಲಾಖೆ ಪ್ರಕರಣಗಳಿಂದ ರಕ್ಷಣೆ ಕೊಡಿಸುವಂತೆ ಕೋರಿದ್ದಾರೆ. ಈ ಸಂಬಂಧ ಶಿವಕುಮಾರ್ ಅವರು ನಮ್ಮ ಕೇಂದ್ರ ಸಚಿವರ ಮೂಲಕ ಲಾಬಿ ಮಾಡಿದ್ದಾರೆ. ವಿವಿಧ ಮೂಲಗಳ ಮೂಲಕ ನಮ್ಮ ರಾಷ್ಟ್ರೀಯ ಅಧ್ಯಕ್ಷರ ಮೇಲೆ ಒತ್ತಡ ಹೇರಲು ಶಿವಕುಮಾರ್ ಪ್ರಯತ್ನಿಸಿದ್ದಾರೆ ಎಂಬುದು ನನಗೆ ತಿಳಿದಿದೆ. ತಮ್ಮ ವಿರುದ್ಧದ ಜಾರಿ ನಿರ್ದೇಶನಾಲಯದ ಪ್ರಕರಣಗಳನ್ನು ಮುಕ್ತಾಯಗೊಳಿಸಿದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು ತಮ್ಮ ವಿರೋಧ ಇಲ್ಲ ಎಂದು ಶಿವಕುಮಾರ್ ಹೇಳಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ಹೇಳಿದ್ದನ್ನು ಮಾಧ್ಯಮಗಳು ವ್ಯಾಪಕವಾಗಿ ಪ್ರಸಾರ ಮಾಡಿದ್ದವು. ಈ ಹೇಳಿಕೆ ಆಧರಿಸಿ ಶಿವಕುಮಾರ್ ಅವರು ಕನಕಪುರ ನ್ಯಾಯಾಲಯದಲ್ಲಿ ಯತ್ನಾಳ್ ವಿರುದ್ಧ ಅಸಲು ದಾವೆ ಹೂಡಿದ್ದು, ತಮ್ಮ ಘನತೆ ಮತ್ತು ವರ್ಚಸ್ಸಿಗೆ ಹಾನಿಯಾಗಿದೆ. ಇದಕ್ಕಾಗಿ 204 ಕೋಟಿ ರೂ. ಹಾನಿ ತುಂಬಿಕೊಡಲು ಯತ್ನಾಳ್ಗೆ ಆದೇಶಿಸಬೇಕು ಎಂದು ಕೋರಿದ್ದಾರೆ. ಈ ಪ್ರಕರಣವನ್ನು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಯತ್ನಾಳ್ ಕೋರಿದ್ದಾರೆ.