ಬೆಂಗಳೂರು: ಬ್ಲ್ಯಾಕ್ ಮ್ಯಾಜಿಕ್ ಬಳಸಿ ನನ್ನ ಮತ್ತು ನನ್ನ ತಾಯಿಯನ್ನು ಕೊಲೆ ಮಾಡಲು ಯತ್ನಿಸುತ್ತಿದ್ದಾರೆಂದು ಆರೋಪಿಸಿ ಪತ್ನಿ ವಿರುದ್ಧ ಪತಿ ಹೂಡಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಅಲ್ಲದೆ, ಪತ್ನಿ ವಿರುದ್ಧ ಐಪಿಸಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕರ್ನಾಟಕ ಅಮಾನವೀಯ ಪದ್ಧತಿಗಳು ಮತ್ತು ಬ್ಲ್ಯಾಕ್ ಮ್ಯಾಜಿಕ್ ನಿರ್ಮೂಲನೆ ಮತ್ತು ತಡೆ ಕಾಯಿದೆ 2017ರಡಿ ಹೂಡಿದ್ದ ಖಾಸಗಿ ದೂರನ್ನು ಆಧರಿಸಿ ಮ್ಯಾಜಿಸ್ಪ್ರೇಟ್ ನ್ಯಾಯಾಲಯ ಪತ್ನಿ ವಿರುದ್ಧ ತನಿಖೆಗೆ ನೀಡಿದ್ದ ಆದೇಶ ರದ್ದು ಪಡಿಸಿದೆ.
ಬೆಂಗಳೂರಿನ ಮೊಹಮ್ಮದ್ ಶಾಹೀದ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ. ಜತೆಗೆ, ಸಿಆರ್‌ಪಿಸಿ ಸೆಕ್ಷನ್ 200ರಡಿಯಲ್ಲಿ ಪತಿ ದಾಖಲಿಸಿರುವ ದೂರಿನ ಬಗ್ಗೆ ಯಾಂತ್ರಿಕವಾಗಿ ತನಿಖೆಗೆ ಆದೇಶಿಸುವ ಮುನ್ನ ಮ್ಯಾಜಿಸ್ಪ್ರೇಟ್ ನ್ಯಾಯಾಧೀಶರು ಸ್ವಲ್ಪ ವಿವೇಚನೆಯನ್ನು ಬಳಸಬೇಕಿತ್ತು. ಹಾಗೆ ಮಾಡಿದ್ದರೆ ನಕಲಿ ಕೇಸುಗಳನ್ನು ಬುಡದಲ್ಲಿಯೇ ಕಿತ್ತುಹಾಕಬಹುದಿತ್ತು. ಪತಿ-ಪತ್ನಿ ನಡುವಿನ ಸಾಮಾನ್ಯ ಕೌಟುಂಬಿಕ ಜಗಳಕ್ಕೆ ಬ್ಲ್ಯಾಕ್ ಮ್ಯಾಜಿಕ್, ಕಳವು ಮತ್ತು ಕೊಲೆಯತ್ನ ಆರೋಪಗಳನ್ನು ಹೊರಿಸಲಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ಹೇಳಲಾಗಿದೆ.
ದೂರುದಾರ ಹಾಗೂ ಪತ್ನಿ ಮತ್ತು ಅವರ ಸ್ನೇಹಿತನ ಜತೆ ನಡೆದ ವಾಟ್ಸಪ್ ಸಂಭಾಷಣೆ ವಿವರಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯ, ಪತ್ನಿ ಸಲ್ಲಿಸಿದ್ದ ವರದಕ್ಷಿಣೆ ಕಿರುಕುಳ ದೂರಿಗೆ ಪ್ರತಿಯಾಗಿ ಪತಿ ಈ ದೂರು ದಾಖಲಿಸಿದ್ದಾರೆ. ಅಲ್ಲದೆ, ತನ್ನ ಜೇಬಿನಿಂದ ಕದ್ದ ಹಣವನ್ನು ಪತ್ನಿ ಕೊಲೆಗೆ ಸುಪಾರಿ ನೀಡಿದ್ದಾರೆಂದು ಪತಿ ಆರೋಪಿಸಿದ್ದಾರೆ. ಅದನ್ನು ಒಪ್ಪಲಾಗದು. ಎಲ್ಲಾ ರೀತಿಯಲ್ಲೂ ದೂರು ಸ್ವೀಕಾರಾರ್ಹವಲ್ಲ. ಪತಿ ಅನಗತ್ಯವಾಗಿ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ನ್ಯಾಯಪೀಠ ತಿಳಿಸಿದೆ.
ಇದನ್ನೂ ಓದಿ: ಧರ್ಮದ ಹೆಸರಿನಲ್ಲಿ ಚುನಾವಣಾ ಪ್ರಚಾರ ಆರೋಪ: ಯತ್ನಾಳ ವಿರುದ್ಧದ ಪ್ರಕರಣ ರದ್ದು - Yatnal Case
ಪತ್ನಿಯ ಪರ ವಕೀಲರು, ಖಾಸಗಿ ದೂರು ದಾಖಲಿಸಿರುವುದೇ ಕಾನೂನಿನ ದುರ್ಬಳಕೆಯಾಗಲಿದೆ. ಕೊಲೆ ಯತ್ನ ಎಂದು ಹೇಳಲು ಯಾವುದೇ ಸಾಕ್ಷ್ಯ ಇಲ್ಲ, ದಂಪತಿ ನಡುವೆ ಗಲಾಟೆ ಅಥವಾ ಜಗಳ ಕೂಡ ನಡೆದಿಲ್ಲ ಎಂದು ಹೇಳಿದ್ದರು. ಪತಿಯ ಪರ ವಕೀಲರು, ಪತ್ನಿ ಹಾಗೂ ಎರಡನೇ ಆರೋಪಿ ವಾಟ್ಸಪ್ನಲ್ಲಿ ಬ್ಲ್ಯಾಕ್ ಮ್ಯಾಜಿಕ್ ಬಳಸಿ ತನ್ನನ್ನು ಹಾಗೂ ತನ್ನ ತಾಯಿಯನ್ನು ಕೊಲ್ಲಲ್ಲು ಸಂಚು ರೂಪಿಸಿರುವ ಸಂಭಾಷಣೆಯನ್ನು ನಾನು ನೋಡಿದ್ದೇನೆ. ಹಾಗಾಗಿ ಪತ್ನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದರು.
ಪ್ರಕರಣದ ಹಿನ್ನೆಲೆ: ಬ್ಲ್ಯಾಕ್ ಮ್ಯಾಜಿಕ್ ಬಳಸಿ ಪತ್ನಿ ತನ್ನನ್ನು ಮತ್ತು ತನ್ನ ತಾಯಿಯನ್ನು ಕೊಲೆ ಮಾಡಲು ಯತ್ನಿಸುತ್ತಿದ್ದಾರೆಂದು ಪತಿ 2023ರ ಫೆ.21ರಂದು ಮ್ಯಾಜಿಸ್ಟೇಟ್ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಆ ಕುರಿತು ವಿಚಾರಣೆ ನಡೆಸಿದ ಮ್ಯಾಜಿಸ್ಪ್ರೇಟ್, ಸಿಆರ್‌ಪಿಸಿ ಸೆಕ್ಷನ್ 156(2) ಅಡಿ ತನಿಖೆಗೆ ಆದೇಶಿಸಿದ್ದರು. ಅದರಂತೆ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.