ಬೆಂಗಳೂರು: ರಾಜಧಾನಿಯ ಪ್ರಮುಖ ಕೆರೆಗಳಲ್ಲಿ ಒಂದಾದ ಹಲಸೂರು ಕೆರೆಯ ಮಾಲಿನ್ಯಕ್ಕೆ ಕೇಂದ್ರ ರಕ್ಷಣಾ ಇಲಾಖೆ ಅಧೀನ ಮದ್ರಾಸ್ ಎಂಜಿನಿಯರಿಂಗ್ ಸಮೂಹ ಹಾಗೂ ಗ್ಯಾರಿಸನ್ ಎಂಜಿನಿಯರಿಂಗ್ ಸಂಸ್ಥೆಗಳಿಗೆ 2.94 ಕೋಟಿ ರೂ. ದಂಡ ವಿಧಿಸಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಪ್ರಕರಣವನ್ನು ಮರು ಪರಿಶೀಲಿಸಿ ಸೂಕ್ತ ಆದೇಶ ಹೊರಡಿಸುವಂತೆ ಎನ್‌ಜಿಟಿಗೆ ವಾಪಸ್ ಕಳುಹಿಸಿದ್ದು, ಅಲ್ಲಿಯವರೆಗೂ 1 ಕೋಟಿ ರೂ.ಗಳ ಠೇವಣಿ ನೀಡಬೇಕು. ಈ ಮೊತ್ತ ಅಂತಿಮ ಆದೇಶಕ್ಕೆ ಒಳಪಡಲಿದೆ ಎಂದು ಹೈಕೋರ್ಟ್ ಸೂಚನೆ ನೀಡಿದೆ.
ಎನ್‌ಜಿಟಿ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಸ್ವಾಭಾವಿಕ ನ್ಯಾಯದ ತತ್ವಗಳ ಉಲ್ಲಂಘನೆ: ಪರಿಸರ ಹಾನಿ ಮಾಡಿದ ಆರೋಪದಲ್ಲಿ ದಂಡ ವಿಧಿಸಲಾಗಿದೆ. ದಂಡಕ್ಕೆ ಗುರಿಯಾಗಿರುವ ಸಂಸ್ಥೆಯ ವಾದವನ್ನು ಮಂಡಿಸಿವುದಕ್ಕೆ ಅವಕಾಶ ನೀಡಿದೆ ಏಕಪಕ್ಷೀಯವಾಗಿ ನೀಡಿರುವುರು ಸ್ವಾಭಾವಿಕ ನ್ಯಾಯದ ತತ್ವಗಳನ್ನು ಉಲ್ಲಂಘಿಸಲಾಗಿದೆ ಎಂದು ಕಾರಣವನ್ನು ನೀಡಿ ಹೈಕೋರ್ಟ್ ಈ ಆದೇಶ ನೀಡಿದೆ.
ಹಲಸೂರು ಕೆರೆಯಲ್ಲಿ ಎರಡು ಎಂಎಲ್‌ಡಿ ಕೊಳಚೆ ನೀರು ಶುದ್ದೀಕರಣ ಘಟಕ (ಎಸ್‌ಟಿಪಿ) ಕಾರ್ಯನಿರ್ವಹಣೆ ಮಾಡುತ್ತಿದೆ. ಅದರ ಮಾನದಂಡಗಳನ್ನು ಅನುಸರಿದ ಆರೋಪದಲ್ಲಿ ಎನ್‌ಜಿಟಿ 2021ರಲ್ಲಿ 2.94 ಕೋಟಿ ರೂ.ಗಳ ದಂಡ ವಿಧಿಸಿತ್ತು. ಏಕಪಕ್ಷೀಯವಾಗಿ ಹೊರಡಿಸಿದ್ದ ಈ ಮಧ್ಯಂತರ ಆದೇಶವನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿದೆ.
ಮರುಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಹೈಕೋರ್ಟ್ ಸೂಚನೆ: ಅಲ್ಲದೆ, ಅರ್ಜಿದಾರರ ವಾದ ಮಂಡನೆಗೆ ಅವಕಾಶ ನೀಡುವ ಮೂಲಕ ಅವರಿಗೆ ದಂಡ ವಿಧಿಸುವುದು ಅಥವಾ ಇತರೆ ಶಿಕ್ಷೆ ನೀಡುವ ಕುರಿತಂತೆ ಮರುಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದಿರುವ ಹೈಕೋರ್ಟ್, ಚೆನ್ನೈನಲ್ಲಿರುವ ದಕ್ಷಿಣ ವಲಯ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಅರ್ಜಿಯನ್ನು ರವಾನಿಸಿದೆ.
ಆದರೆ, ಅರ್ಜಿಯ ಸಂಬಂಧ ಎನ್‌ಜಿಟಿ ವಿಚಾರಣೆ ನಡುವೆ ಮೇಲ್ಮನವಿ ದಾರರು ಈಗಾಗಲೇ ವಿಧಿಸಿರುವ 2.94 ಕೋಟಿಯ ಬದಲಾಗಿ 1 ಕೋಟಿ ರೂ.ಗಳನ್ನು ಕರ್ನಾಟಕ ಪರಿಸರ ನಿಯಂತ್ರಣಾ ಮಂಡಳಿಯಲ್ಲಿ ಠೇವಣಿ ಇಡಬೇಕು. ಈ ಮೊತ್ತ ಪಾವತಿಸಿರುವುದು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರಲಿದೆ ಎಂದು ಪೀಠ ಹೇಳಿದೆ.
ಮಾಲಿನ್ಯ ಸಂಬಂಧ ಮೌಲ್ಯಮಾಪನ ಕಾರ್ಯ ನಡೆಸದಿದ್ದರೂ ದಂಡ ಪಾವತಿಸುವಂತೆ ಮಾಲಿನ್ಯ ನಿಯಂತ್ರಣಾ ಮಂಡಳಿ ಡಿಮ್ಯಾಂಡ್ ನೋಟಿಸ್ ನೀಡಲಾಗಿದೆ. ಅರ್ಜಿದಾರರನ್ನು ಆಲಿಸದೆ ಮತ್ತು ಪ್ರತಿವಾದಿಗಳನ್ನು ಮಾಲಿನ್ಯಕ್ಕೆ ಕಾರಣವಾಗಿರುವ ಸಂಬಂಧ ಮೌಲ್ಯಮಾಪನ ಮಾಡದೆ ಪರಿಹಾರ ಪಾವತಿಸಲು ಕೋರುವುದಕ್ಕೆ ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಹಲಸೂರು ಕೆರೆಯ ಮಾಲಿನ್ಯದಿಂದ ಮೀನುಗಳ ಮಾರಣಹೋಮ ಎಂಬುದಾಗಿ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ವರದಿಗಳನ್ನು ಆಧರಿಸಿ 2016ರಲ್ಲಿ ಎನ್‌ಜಿಟಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು. ಅಲ್ಲದೆ, ಕಸಾಯಿಖಾನೆ, ಎಂಇಜಿ ಮತ್ತು ಜಲ ಮಂಡಳಿಯಿಂದ ಮಾಲಿನ್ಯಕ್ಕೆ ಕಾರಣವಾಗಿದೆ ಎಂದು ಆರೋಪಿಸಲಾಗಿತ್ತು. ಅಲ್ಲದೆ, ಪರಿಸರ ಮಾಲಿನ್ಯಕ್ಕೆ ಕಾರಣವಾದ ಬೆಂಗಳೂರು ಜಲ ಮಂಡಳಿಯು 1 ಲಕ್ಷ ರೂ.ಗಳನ್ನು ಪರಿಸರ ಪರಿಹಾರವನ್ನಾಗಿ ನೀಡಬೇಕು ಎಂದು ಸೂಚನೆ ನೀಡಿತ್ತು.
ವಿಚಾರಣೆ ವೇಳೆ ಹೆಚ್ಚುವರಿ ಸಾಲಿಸೇಟರ್ ಜನರಲ್ ಅರವಿಂದ ಕಾಮತ್, ''ಎಂಇಜಿ ಘಟಕ ಮತ್ತು ಬೆಂಗಳೂರಿನ ಗ್ಯಾರಿಸನ್ ಎಂಜನಿಯರಿಂಗ್ ಘಟಕಗಳು ರಕ್ಷಣಾ ಸಚಿವಾಲಯದ ಅದೀನದಲ್ಲಿದೆ. ಜಲಮಂಡಳಿಯು 2019ರಲ್ಲಿ ನಿರ್ಮಿಸಿರುವ 100 ಕೆಎಲ್‌ಡಿ-ಎಸ್‌ಟಿಪಿಗೆ ಮೂಲಕ ಮಳೆನೀರು ನೀರು ಎಂಇಜಿ ಕೇಂದ್ರ ಮೂಲಕ ಕರೆಯನ್ನು ಸೇರಲಿವೆ'' ಎಂದು ಪೀಠಕ್ಕೆ ತಿಳಿಸಿದ್ದರು.
''ಅಲ್ಲದೆ, ಕೆರೆಯ ಮಾಲಿನ್ಯಕ್ಕೆ ಜಲ ಮಂಡಳಿ ಮತ್ತಿತರ ಸಂಸ್ಥೆಗಳು ಪ್ರಮುಖ ಕಾರಣವಾಗಿವೆ. ಆದರೆ, ಪ್ರಕರಣದಲ್ಲಿ ಮೇಲ್ಮನವಿದಾರರನ್ನು ಸಿಲುಕಿಸಲಾಗುತ್ತಿದ್ದು, ಅದಕ್ಕೆ ಅವಕಾಶ ನೀಡಬಾರದು. ಮಾಲಿನ್ಯಕ್ಕೆ ಎಂಇಜಿ ಕೇಂದ್ರದ ಒಳಚರಂಡಿ ಭಾಗ ಅತ್ಯಂತ ಕಡಿಮೆಯಿದೆ. ಜೊತೆಗೆ, 1200 ಕೆಎಲ್‌ಡಿಯಿರುವ ಎಸ್‌ಟಿಪಿ ನಿರ್ಮಾಣಕಾರ್ಯ ಪ್ರಗತಿಯಲ್ಲಿದೆ'' ಎಂದು ವಿವರಿಸಿದ್ದರು.
ಇದನ್ನೂ ಓದಿ: ಮೈಸೂರು: ಮದ್ಯ ಕುಡಿಯಲು ಹಣ ಕೊಡಲಿಲ್ಲವೆಂದು ಪತ್ನಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ