ಬೆಂಗಳೂರು: ವಿಧಾನಪರಿಷತ್ ಉಪಚುನಾವಣೆ ವೇಳೆ ಮದ್ಯ ಮಾರಾಟ ಅವಧಿಯನ್ನು ಹೈಕೋರ್ಟ್ ಮಾರ್ಪಾಡು ಮಾಡಿ, ಮತದಾನ ಮತ್ತು ಮತ ಎಣಿಕೆ ದಿನಕ್ಕೆ ಮಾತ್ರ ಸೀಮಿತಗೊಳಿಸಿ ಆದೇಶಿಸಿದೆ.
ಇದೇ 1ರಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶ ಪ್ರಶ್ನಿಸಿ ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘಟನೆಯ ಕಾರ್ಯದರ್ಶಿ ವೀರೇಂದ್ರ ಎನ್.ಕಾಮತ್ ಸೇರಿದಂತೆ ಒಟ್ಟು ನಾಲ್ವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಅವರಿದ್ದ ಪೀಠ ಈ ಅಭಿಪ್ರಾಯ ತಿಳಿಸಿದೆ.
ಮದ್ಯ ಮಾರಾಟ ನಿಷೇಧ ಅವಧಿ: ಅಲ್ಲದೇ ಮತದಾನದ ದಿನವಾದ ಫೆ.16 ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಮತ್ತು ಮತ ಎಣಿಕೆ ದಿನ ಫೆಬ್ರವರಿ 20ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಮಾತ್ರ ಮದ್ಯ ಮಾರಾಟ ನಿಷೇಧ ಇರಲಿದೆ ಎಂದು ನ್ಯಾಯ ಪೀಠ ಆದೇಶಿಸಿದೆ.
ಆದರೆ ಈ ದಿನಗಳಂದು ರೆಸ್ಟೋರೆಂಟ್ಸ್ಗಳಲ್ಲಿ ಮದ್ಯವನ್ನು ಹೊರತುಪಡಿಸಿ ಆಹಾರ ಪೂರೈಸಲು ನಿರ್ಬಂಧವಿಲ್ಲ. ಮತದಾರರು ಶಿಕ್ಷಕರು ಆಗಿರುವುದರಿಂದ ಮದ್ಯಪಾನದ ನಿರ್ಬಂಧ ಪರಿಶೀಲನೆ, ಮದ್ಯಪಾನ ನಿರ್ಬಂಧಿಸದಿದ್ದರೆ ಶಿಕ್ಷಕರು ಮದ್ಯ ಸೇವಿಸುತ್ತಾರೆಂದು ಭಾವಿಸಬೇಕಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಈ ಹಿಂದೆ ಅರ್ಜಿಯ ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಾಗಿದ್ದ ಹಿರಿಯ ವಕೀಲ ಎಂ ಅರುಣ್ ಶ್ಯಾಮ್, ಇದು ಸಾರ್ವತ್ರಿಕ ಚುನಾವಣೆಯಲ್ಲ. ಇದರಲ್ಲಿ ಕೇವಲ 16 ಸಾವಿರ ಮತದಾರರು ಮಾತ್ರ ಮತ ಚಲಾಯಿಸಲು ಅರ್ಹತೆ ಹೊಂದಿದ್ದಾರೆ. ಹೀಗಾಗಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧಿಸಿದರೆ ವರ್ತಕರು, ಉದ್ದಿಮೆದಾರರು ಸಾಕಷ್ಟು ತೊಂದರೆ ಅನುಭವಿಸಲಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.
ಪರಿಷತ್ತಿನ ಚುನಾವಣೆಯಲ್ಲಿ ಬಾಂಬೆ ಹೈಕೋರ್ಟ್ ಸಹ ಇಂಥ ನಿಷೇಧ ಅವಧಿಯನ್ನು ಒಂದು ದಿನಕ್ಕೆ ಸೀಮಿತಗೊಳಿಸಿರುವ ಉದಾಹರಣೆಯಿದೆ. ಹಾಗಾಗಿ ಈ ಪ್ರಕರಣದಲ್ಲೂ ಕೇವಲ ಮತದಾನದ ದಿನದಂದು ಮಾತ್ರವೇ ನಿಷೇಧ ಅನ್ವಯಿಸಲು ನಿರ್ದೇಶಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.
ಅಲ್ಲದೇ ಅರ್ಜಿದಾರರು ಎಂದಿನಂತೆ ಉಳಿದ ಅವಧಿಯಲ್ಲಿ ಚಿಲ್ಲರೆ, ಸಗಟು ವ್ಯಾಪಾರ, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್‌ಗಳನ್ನು ತೆರೆಯಲು ಅನುಮತಿ ನೀಡುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಬೇಕು ಅವರು ನ್ಯಾಯಪೀಠಕ್ಕೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ಈ ಕುರಿತಂತೆ ಕಾನೂನು ಏನು ಹೇಳುತ್ತದೆ ಎಂಬುದನ್ನು ವಿವರಿಸಿ ಎಂದು ಸರ್ಕಾರಕ್ಕೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.
ಪ್ರಕರಣವೇನು ?: ರಾಜ್ಯದಲ್ಲಿ 2024ರ ವಿಧಾನಪರಿಷತ್ ಚುನಾವಣೆ ಇದೇ 16 ರಂದು ನಿಗದಿಯಾಗಿದೆ. ಈ ಹಿನ್ನೆಲೆ ಚುನಾವಣೆಗೆ ಒಂದು ದಿನ ಮುನ್ನ ಸೇರಿ ಒಟ್ಟು 48 ಗಂಟೆಗಳ ಕಾಲ ಬೆಂಗಳೂರು ನಗರದಲ್ಲಿ ಮದ್ಯ ಮಾರಾಟಕ್ಕೆ ನಿಷೇಧಿಸಿರುವುದಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂಓದಿ:ವಿಧಾನಪರಿಷತ್ ಚುನಾವಣೆ: 48 ಗಂಟೆ ಮದ್ಯ ಮಾರಾಟ ನಿಷೇಧ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ