ಬೆಂಗಳೂರು: ತಂದೆ ತನ್ನ ಮಗನಿಗೆ ಆಸ್ತಿಯ ಗಿಫ್ಟ್ ಡೀಡ್ (ಉಡುಗೊರೆಯಾಗಿ) ಮಾಡಿಕೊಡುವಾಗ ಅದರಲ್ಲಿ ತನ್ನನ್ನು ನೋಡಿಕೊಳ್ಳುವ ಕುರಿತಂತೆ ಷರತ್ತು ಉಲ್ಲೇಖಿಸಿಲ್ಲ ಎಂಬ ಕಾರಣಕ್ಕೆ ಆ ಪತ್ರವನ್ನು ಉಪ ವಿಭಾಗಾಧಿಕಾರಿ ರದ್ದುಗೊಳಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಪ್ರಕರಣ ಸಂಬಂಧ ರಾಮನಗರ ಜಿಲ್ಲೆಯ ಚನ್ನಪಟ್ಟಣ ಮೂಲದ ವಿವೇಕ್ ಜೈನ್ ಎಂಬುವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ಅಲ್ಲದೇ, ಹಿರಿಯ ನಾಗರಿಕರಾದ ತಂದೆ ತನ್ನ ಪುತ್ರನಿಗೆ ಆಸ್ತಿಯ ಉಡುಗೊರೆ ಪತ್ರ ಮಾಡಿಕೊಡುವಾಗ ಅದರಲ್ಲಿ ತನ್ನನ್ನು ನೋಡಿಕೊಳ್ಳುವ ಕುರಿತು ಯಾವುದೇ ಷರತ್ತು ಉಲ್ಲೇಖಿಸಿಲ್ಲ ಎಂಬ ಕಾರಣಕ್ಕೆ ಆ ಗಿಫ್ಟ್ ಡೀಡ್ ಅನ್ನು ಉಪ ವಿಭಾಗಾಧಿಕಾರಿಯು ರದ್ದುಗೊಳಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಉಪ ವಿಭಾಗಾಧಿಕಾರಿಯ ಆದೇಶ ರದ್ದು ಮಾಡುತ್ತಿರುವುದಾಗಿ ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ರಾಮನಗರ ಜಿಲ್ಲೆಯ ಚನ್ನಪಟ್ಟಣದ ಹರ್ಷ ಎಂಬುವರಿಗೆ ಅವರ ತಂದೆ ಶ್ರೀನಿವಾಸ್ ತನ್ನ ಆಸ್ತಿಯನ್ನು ಗಿಫ್ಟ್ ಡೀಡ್ ಮಾಡಿಕೊಟ್ಟಿದ್ದರು. ಈ ಆಸ್ತಿಯನ್ನು ಹರ್ಷ ಅವರು ವಿವೇಕ್ ಜೈನ್ ಎಂಬುವರಿಗೆ ಮಾರಾಟ ಮಾಡಿದ್ದರು. ಇದರಿಂದ ಅಸಮಾಧಾನಗೊಂಡ ಹರ್ಷ ಅವರ ತಂದೆ, ತನ್ನ ಪುತ್ರನಿಗೆ ನೀಡಿದ್ದ ಆಸ್ತಿಯ ಗಿಫ್ಟ್ ಡೀಡ್ ರದ್ದು ಮಾಡಬೇಕು ಎಂದು ಕೋರಿ ರಾಮನಗರ ಜಿಲ್ಲೆಯ ಕಮಿಷನರ್ ಸೀನಿಯರ್ ಸಿಟಿಜನ್ ಟ್ರಿಬ್ಯೂನಲ್ಗೆ ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಉಪ ವಿಭಾಗಾಧಿಕಾರಿ, ಗಿಫ್ಟ್ ಡೀಡ್‌ನ್ನು ರದ್ದುಗೊಳಿಸಿ 2021ರ ಜುಲೈ 7ರಂದು ಆದೇಶಿಸಿದ್ದರು. ಈ ಆದೇಶ ರದ್ದುಗೊಳಿಸುವಂತೆ ಕೋರಿ ಅರ್ಜಿದಾರರ ವಿವೇಕ್ ಜೈನ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಅರ್ಜಿದಾರರು ಆಸ್ತಿ ಖರೀದಿ ಮಾಡಿದ ವೇಳೆ ಮಾರಾಟಗಾರನ ತಂದೆಯೂ ಹಾಜರಿದ್ದರು. ಅದರ ಅನ್ವಯ ತಂದೆಯ ಖಾತೆಗೆ 15 ಲಕ್ಷ ರೂ. ಪಾವತಿಸಲಾಯಿತು. ಅಲ್ಲದೇ, ಮಾಸಿಕ 10 ಸಾವಿರ ರೂ.ಗಳನ್ನು ತಂದೆಯ ಖಾತೆಗೆ ಜಮೆ ಮಾಡುವುದಾಗಿ ಹೇಳಲಾಗಿರುತ್ತದೆ. ಆದರೆ, ಇದೀಗ ಉಡುಗೊರೆ ಪತ್ರ ಮಾಡಿಕೊಡುವಾಗ ಅದರಲ್ಲಿ ತಮ್ಮನ್ನು ನೋಡಿಕೊಳ್ಳುವ ಕುರಿತು ಯಾವುದೇ ಷರತ್ತು ಉಲ್ಲೇಖವಾಗಿಲ್ಲ ಎಂಬ ತಂದೆಯ ಹೇಳಿಕೆ ಪರಿಗಣಿಸಿ, ಅದನ್ನು ಉಪ ವಿಭಾಗಾಧಿಕಾರಿಯೂ ರದ್ದುಗೊಳಿಸಿ ಆದೇಶ ಹೊರಡಿಸಿರುವುದು ಒಪ್ಪುವಂತದ್ದಲ್ಲ. ಆ ಆದೇಶವನ್ನು ರದ್ದುಗೊಳಿಸಬೇಕು'' ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಶ್ರೀನಿವಾಸ್ ಪರ ವಕೀರು, ''ಪತ್ನಿಯ ನಿಧನದ ನಂತರ ಆಸ್ತಿ ಇವರ ಸ್ವತ್ತಾಯಿತು. ಬಳಿಕ ಅವರು ತನ್ನ ಮಗ ಹರ್ಷನಿಗೆ ಉಡುಗೊರೆಯಾಗಿ ನೀಡಿದರು. ಆತ ಇದನ್ನು ವಿವೇಕ್ ಜೈನ್ ಎನ್ನುವವರಿಗೆ ಮಾರಾಟ ಮಾಡಿದ್ದರು. ತಂದೆಗೆ ಕಾನೂನಿನ ಕುರಿತಾಗಿ ಸಮರ್ಪಕ ಜ್ಞಾನವಿರಲಿಲ್ಲ. ಪ್ರಸ್ತುತ ಮಾರಾಟ ಪತ್ರ ಕಾರ್ಯಗತಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದ ಅರ್ಜಿದಾರರಿಗಿಂತ ಹೆಚ್ಚಾಗಿ ಶ್ರೀನಿವಾಸ್ ತಮ್ಮ ಮಗನ ಆಸ್ತಿಯ ಮೇಲೆ ಹಕ್ಕು ಹೊಂದಿರುತ್ತಾರೆ. ಹಾಗಾಗಿ, ಅರ್ಜಿ ವಜಾಗೊಳಿಸಬೇಕು'' ಎಂದು ಕೋರಿದರು.
ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ: ಆರೋಪಿ ಡಿವೈಎಸ್‌ಪಿ ಶ್ರೀಧರ್ ಬಂಧಿಸದಂತೆ ಹೈಕೋರ್ಟ್ ಆದೇಶ - High Court Order