ಬೆಂಗಳೂರು: ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಗ್ರೂಪ್ -ಸಿ ಹುದ್ದೆಗಳ ಭರ್ತಿಗೆ ಹೊರಡಿಸಿದ್ದ ಅಧಿಸೂಚನೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಈ ಆದೇಶದಿಂದ ಗ್ರೂಪ್-ಸಿ ಹುದ್ದೆಗಳ ನೇಮಕಾತಿಗೆ ತಡೆಯಾದಂತಾಗಿದೆ. ಗ್ರೂಪ್ ಸಿ ಹುದ್ದೆಗಳ ಭರ್ತಿಗೆ ಬಿಇಎಂಎಲ್ ಹೊರಡಿಸಿದ ಸುತ್ತೋಲೆ ಪ್ರಶ್ನಿಸಿ ಹಾಗೂ ತಮ್ಮ ಸೇವೆಯನ್ನೇ ಕಾಯಂಗೊಳಿಸಲು ಆದೇಶಿಸುವಂತೆ ಕೋರಿ ಬಿಇಎಂಎಲ್ ಗುತ್ತಿಗೆ ಕಾರ್ಮಿಕರ ಸಂಘ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅಲ್ಲದೆ, ಮುಂದಿನ ಒಂದು ತಿಂಗಳ ಕಾಲ ಬಿಇಎಂಎಲ್ 2023 ರ ಸೆ.27ರಂದು ಹೊರಡಿಸಿದ ಅಧಿಸೂಚನೆಯನ್ನು ಅಮಾನತ್ತಿನಲ್ಲಿ ಇರಿಸುವುದಾಗಿ ಪೀಠ ತಿಳಿಸಿದೆ. ಅಧಿಸೂಚನೆ ಅಡಿಯಲ್ಲಿ ಉದ್ಯೋಗ ಅವಕಾಶ ಒದಗಿಸುವಂತೆ ಗುತ್ತಿಗೆ ನೌಕರರ ಮನವಿ ಪರಿಗಣಿಸುವಂತೆ ಬಿಇಎಂಎಲ್ಗೆ ನ್ಯಾಯಪೀಠ ನಿರ್ದೇಶಿಸಿತು.
ಗುತ್ತಿಗೆ ನೌಕರರು ಅರ್ಹತೆ ಹೊಂದಿದ್ದು ಮತ್ತು ತೃಪ್ತಿದಾಯಕವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶ ನೀಡದಿರುವಲ್ಲಿ ನ್ಯಾಯಯುತ ಕಾರಣವಿರಬಹುದು. ನಿರ್ದಿಷ್ಟ ಕೌಶಲ ಅಥವಾ ಇತರ ಮಾನ್ಯ ಕಾರಣಗಳಿಂದ ಗ್ರೂಪ್ -ಸಿ ಹುದ್ದೆಗಳಿಗೆ ಗುತ್ತಿಗೆ ನೌಕರರ ಹೊರತಾಗಿ ಬೇರೆ ನೌಕರರನ್ನು ಆಹ್ವಾನಿಸುವುದು ಕಾನೂನಾತ್ಮಕವಾಗಿ ಸಮರ್ಥನೀಯ ಎನ್ನಬಹುದು. ಆಗ ಮಾತ್ರ ಕಾಯಂಗೊಳಿಸುವ ಅರ್ಹತೆ ಹೊಂದಿರುವ ಗುತ್ತಿಗೆ ಕಾರ್ಮಿಕರ ಹಕ್ಕುಗಳನ್ನು ನಿರ್ಲಕ್ಷಿಸಬಹುದು ಎಂದು ಪೀಠ ಅಭಿಪ್ರಾಯಪಟ್ಟಿದೆ.
ಉದ್ಯೋಗದಾತರು ಗುತ್ತಿಗೆ ಕಾರ್ಮಿಕರ ಸ್ಥಿತಿಗತಿಯನ್ನು ಪರಿಶೀಲಿಸಿ ನಿಯಮಗಳಿಗೆ ಅನುಸಾರ ಅವರ ಅರ್ಹತೆಯನ್ನು ನಿರ್ಣಯಿಸುವುದು ಮತ್ತು ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ನ್ಯಾಯೋಚಿತ ಮತ್ತು ಪಾರದರ್ಶಕವಾಗಿ ನಡೆಸುವುದು ಮುಖ್ಯ. ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕೆ ಅಥವಾ ಬೇಡವೇ ಎಂಬುದು ಸೂಕ್ತ ಬಿಇಎಂಎಲ್ ನಿರ್ಣಯಕ್ಕೆ ಮಾತ್ರ ಒಳಪಟ್ಟಿರುತ್ತದೆ ಎಂಬ ಸರ್ಕಾರದ ಮನವಿಯನ್ನು ಪೀಠ ತಿರಸ್ಕರಿಸಿದೆ.
ಕಾನೂನಿನಡಿಯಲ್ಲಿ ಕಾರ್ಮಿಕರು ತಮ್ಮದೇ ಆದ ಕಾನೂನು ಬದ್ಧ ಹಕ್ಕುಗಳನ್ನು ಹೊಂದಿರಬಹುದು. ಈ ಬಗ್ಗೆ ಕೈಗಾರಿಕಾ ನ್ಯಾಯಮಂಡಳಿಯನ್ನು ಸಂಪರ್ಕಿಸುವುದು ಉತ್ತಮ ಎಂದು ಸಲಹೆ ನೀಡಿದ್ದು, ಈ ವಿಚಾರವಾಗಿ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಗ್ರೂಪ್ -ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಹೊರಡಿಸಿದ್ದ ಅಧಿಸೂಚನೆ ಅನ್ನು ಒಂದು ತಿಂಗಳಕಾಲ ಅಮಾನತ್ತಿನಲ್ಲಿ ಇರಿಸುವಂತೆ ಮಧ್ಯಂತರ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಪಶು ವೈದ್ಯಕೀಯ ಆಸ್ಪತ್ರೆ ಸ್ಥಳಾಂತರ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ - Veterinary Hospital Transfer