ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಎಸ್ಟೇಟ್ ರೂರಲ್ ಇಂಡಸ್ಟ್ರೀ ಅಸೋಸಿಯೇಷನ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗೆ ಸೇರಿದ ಪ್ಲಾಂಟೇಷನ್ ಲ್ಯಾಂಡ್ನ್ನು (ತೋಟದ ಜಮೀನು) ಬಿಟ್ಟುಕೊಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ನ್ಯಾಯಾಲಯದ ನಿರ್ದೇಶನದಂತೆ ತಮ್ಮ ಜಮೀನನ್ನು ವಶಪಡಿಸಿಕೊಂಡು ಸರ್ಕಾರದ ಸ್ವಾಧೀನಕ್ಕೆ ಒಪ್ಪಿಸಬೇಕು ಎಂದು ತಹಶೀಲ್ದಾರರಿಗೆ ಸೂಚಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ 2008ರ ಜನವರಿ 17ರಂದು ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ನೆರಿಯ ಎಸ್ಟೇಟ್ ರೂರಲ್ ಇಂಡಸ್ಟ್ರೀ ಅಸೋಸಿಯೇಷನ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನೆರಿಯ ಗೋಪಾಲಕೃಷ್ಣ ಹೆಬ್ಬಾರ್ ಮೇಲ್ಮನವಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಅಲ್ಲದೇ, ನೆರಿಯ ಎಸ್ಟೇಟ್ ರೂರಲ್ ಇಂಡಸ್ಟ್ರೀ ಅಸೋಸಿಯೇಷನ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗೆ ಸೇರಿದ ಜಮೀನು ಸರ್ಕಾರದ ಸ್ವಾಧೀನದಲ್ಲಿದೆ ಎಂದು ಹೇಳಲಿಕ್ಕಾಗದು ಎಂದು ಹೇಳಿರುವ ಹೈಕೋರ್ಟ್, ಈ ಜಮೀನಿನ ಮೇಲೆ ಸರ್ಕಾರ ಯಾವುದೇ ಮಾಲೀಕತ್ವ ಅಥವಾ ಸ್ವಾಧೀನದ ಹಕ್ಕು ಹೊಂದುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಜೊತೆಗೆ, ಜಿಲ್ಲಾಧಿಕಾರಿಗಳ ಆದೇಶವನ್ನು ಎತ್ತಿಹಿಡಿದು 2017ರ ಮೇ 29ರಂದು ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಮತ್ತು ಈ ಹಿಂದೆ ನ್ಯಾಯಾಲಯ ನೀಡಿದ್ದ ಆದೇಶದಂತೆ 2007ರ ಆಗಸ್ಟ್ 21ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ರದ್ದುಪಡಿಸಿ ಆದೇಶಿಸಿದೆ. ಅಲ್ಲದೇ, ಮುಂದಿನ ಮೂರು ತಿಂಗಳಲ್ಲಿ ಮೇಲ್ಮನವಿದಾರರ ಹೆಸರನ್ನು ಕಂದಾಯ ದಾಖಲೆಗಳಲ್ಲಿ ಸೇರಿಸಬೇಕು ಎಂದೂ ಹೈಕೋರ್ಟ್ ಆದೇಶಿಸಿದೆ.
ಭೂಸ್ವಾಧೀನದ ಹಕ್ಕು ಪ್ರತಿಪಾದಿಸಿ ಸಂಸ್ಥೆಯು ಅರ್ಜಿ ನಮೂನೆ-7ನ್ನು ಸಲ್ಲಿಸಿತ್ತು. ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆ 1974ರ ಸೆಕ್ಷನ್ (2) (34) ಪ್ರಕಾರ ಕಂಪನಿಗಳು ಭೂ ಹಿಡುವಳಿದಾರರು ಆಗುವಂತಿಲ್ಲ ಎಂಬ ಕಾರಣ ನೀಡಿ ಭೂ ನ್ಯಾಯಮಂಡಳಿ ಅರ್ಜಿಯನ್ನು ತಿರಸ್ಕರಿಸಿತ್ತು. ಅದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು. ಅರ್ಜಿ ನಮೂನೆ-7ನ್ನು ತಿರಸ್ಕರಿಸಿದ್ದು, ಸರಿಯೋ ತಪ್ಪೋ ಅನ್ನುವುದನ್ನು ನಿರ್ಧರಿಸುವ ಬದಲು ನ್ಯಾಯಾಲಯ ಜಮೀನು ಸರ್ಕಾರಕ್ಕೆ ಸೇರಿದ್ದು ಎಂದು ಹೇಳಿತು.
ಜಮೀನಿನ ಸ್ವಾಧೀನದ ಹಕ್ಕು ನಿರ್ಧರಿಸುವ ಅಧಿಕಾರ ಭೂ ನ್ಯಾಯಮಂಡಳಿಗೆ ಮಾತ್ರ ಇರುವುದು. ಹಾಗಾಗಿ, ಜಮೀನಿನ ಸರ್ಕಾರದ ಸ್ವಾಧೀನದ ಬಗ್ಗೆ ಹಿಂದಿನ ವ್ಯಾಜ್ಯಗಳಲ್ಲಿ ಏಕಸದಸ್ಯ ಮತ್ತು ವಿಭಾಗೀಯ ನ್ಯಾಯಪೀಠ ಹೇಳಿರುವುದನ್ನು 'ಸಾಂದರ್ಭಿಕ ಅಭಿಪ್ರಾಯ' ಎಂದು ಪರಿಗಣಿಸಿ, ಸ್ವತಂತ್ರ ಅಭಿಪ್ರಾಯದ ಆಧಾರದಲ್ಲಿ ಈ ಮೇಲ್ಮನವಿಗೆ ಸಂಬಂಧಿಸಿದಂತೆ ತೀರ್ಪು ನೀಡಬೇಕಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ಕಂಪೆನಿ ಭೂ ಹಿಡುವಳಿತನ ಹೊಂದುವಂತಿಲ್ಲ ಎಂದು ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆ-1974ರ ಸೆಕ್ಷನ್ 79(ಬಿ)ಯಲ್ಲಿ ಹೇಳಲಾಗಿತ್ತು. ಆದರೆ, 2020ರಲ್ಲಿ ಪುನಃ ತಿದ್ದುಪಡಿ ತಂದು ಸೆಕ್ಷನ್ 79(ಬಿ) ತೆಗೆದು ಹಾಕಲಾಗಿದೆ. ಆದ್ದರಿಂದ ಜಮೀನಿನ ಸ್ವಾಧೀನ ಹೊಂದಲು ಸಂಸ್ಥೆಗೆ ಯಾವುದೇ ಕಾನೂನಿನ ಅಡ್ಡಿ ಇರುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಅಪ್ರಾಪ್ತೆ ಅಪಹರಿಸಿ ಅತ್ಯಾಚಾರ: ಅಪರಾಧಿಗೆ 10 ವರ್ಷ ಜೈಲು, 1 ಲಕ್ಷ ದಂಡ - Davanagere Rape Case