ಬೆಂಗಳೂರು: ಮಾಜಿ ಸಂಸದ ಡಿ. ಕೆ. ಸುರೇಶ್ ಅವರ ತಂಗಿ ಎಂಬುದಾಗಿ ನಂಬಿಸಿ ಚಿನ್ನದಂಗಡಿ ಮಾಲಕಿಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಸಾಲ ಪಡೆದು ವಂಚನೆ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಐಶ್ವರ್ಯಾ ಗೌಡ ಮತ್ತು ಅವರ ಪತಿ ಕೆ. ಎನ್. ಹರೀಶ್ಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಅಲ್ಲದೇ, ಬಂಧಿತರನ್ನು ತಕ್ಷಣ ಕೂಡಲೇ ಬಿಡುಗಡೆ ಮಾಡುವಂತೆ ಚಂದ್ರಾಲೇಔಟ್ ಠಾಣೆ ಪೊಲೀಸರಿಗೆ ನಿರ್ದೇಶಿಸಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧ ಚಂದ್ರಾಲೇಔಟ್ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಐಶ್ವರ್ಯಾ ಗೌಡ ಮತ್ತು ಅವರ ಪತಿ ಕೆ. ಎನ್. ಹರೀಶ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರ ಪೀಠ ಈ ಆದೇಶ ಮಾಡಿದೆ.
ಪ್ರಕರಣದಲ್ಲಿ ಅರ್ಜಿದಾರರು ಪ್ರಕರಣ ಸಂಬಂಧ ಪೊಲೀಸರು ನೀಡಿದ್ದ ನೋಟಿಸ್‌ಗೆ ಪೂರಕವಾಗಿ ಸ್ಪಂದಿಸಿ, ಸ್ವಯಿಚ್ಛೆಯಿಂದ ಠಾಣೆಗೆ ತೆರಳಿ ತನಿಖೆಗೆ ಸಹಕರಿಸಿದ್ದರು. ಆದರೆ, ಪೊಲೀಸರು ಅರ್ಜಿದಾರರನ್ನು ಏಕಾಏಕಿಯಾಗಿ ಬಂಧಿಸಿದ್ದಾರೆ. ಅದಕ್ಕೂ ಮುನ್ನ ಪೊಲೀಸರು ಬಂಧನಕ್ಕೆ ಸಕಾರಣಗಳನ್ನು ಲಿಖಿತವಾಗಿ ಅರ್ಜಿದಾರರಿಗೆ ನೀಡಿಲ್ಲ. ಇದು ಸುಪ್ರೀಂ ಕೋರ್ಟ್ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಅದರಂತೆ ಅರ್ಜಿದಾರರ ಬಂಧನವು ಕಾನೂನು ಬಾಹಿರವಾಗಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅರ್ಜಿದಾರರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದೆ.
ಅಲ್ಲದೆ, ಆರೋಪಿಗಳು ಪೊಲೀಸರ ತನಿಖೆಗೆ ಸೂಕ್ತವಾಗಿ ಸಹಕರಿಸಬೇಕು ಎಂದು ಷರತ್ತು ವಿಧಿಸಿರುವ ಹೈಕೋರ್ಟ್, ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಚಂದ್ರಾಲೇಔಟ್ ಠಾಣಾ ಪೊಲೀಸರು ಮತ್ತು ದೂರುದಾರೆ ವನಿತಾ ಐತಾಳ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಪ್ರಕರಣದ ಹಿನ್ನೆಲೆ : ಮಾಜಿ ಸಂಸದ ಡಿ. ಕೆ. ಸುರೇಶ್ ತಂಗಿ ಎಂದು ನಂಬಿಸಿ ಚಿನ್ನದಂಗಡಿ ಮಾಲಕಿಯಾದ ಪ್ರಕರಣದ ದೂರುದಾರೆ ವನಿತಾ ಐತಾಳ್ ಅವರಿಂದ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಸಾಲ ಪಡೆದು ವಂಚಿಸಿದ ಆರೋಪ ಸಬಂಧ ಐಶ್ವರ್ಯಾ ಗೌಡ ಮತ್ತು ಪತಿ ಹರೀಶ್ ಅವರನ್ನು ಚಂದ್ರಾಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದರು.
ನ್ಯಾಯಾಲಯವು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ವಿಧಿಸಿತ್ತು. ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ವಶಕ್ಕೆ ನೀಡುವಂತೆ ಪೊಲೀಸರು 4ನೇ ಎಸಿಎಂಎಂ ನ್ಯಾಯಾಲಯಕ್ಕೆ ಸೋಮವಾರ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಾಲಯವು ಇಬ್ಬರು ಆರೋಪಿಗಳನ್ನು ಜ.6ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿತ್ತು. ಆರೋಪಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಕರೆತಂದಿದ್ದ ಪೊಲೀಸರು, ವಿಚಾರಣೆಗೆ ಒಳಪಡಿಸಿದ್ದರು. ಈ ಮಧ್ಯೆ ಎಫ್‌ಐಆರ್ ರದ್ದು ಕೋರಿ ಹೈರ್ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಐಶ್ವರ್ಯಾ ಗೌಡ ಮತ್ತು ಹರೀಶ್, ಮಧ್ಯಂತರ ಜಾಮೀನು ಮೇಲೆ ತಮ್ಮನ್ನು ಬಿಡುಗಡೆ ಮಾಡುವಂತೆ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.
ಇದನ್ನೂ ಓದಿ: 3.25 ಕೋಟಿ ನಗದು, 430 ಗ್ರಾಂ ವಂಚನೆ ಆರೋಪ: ಐಶ್ವರ್ಯ ಗೌಡ ದಂಪತಿ ವಿರುದ್ಧ ಮತ್ತೊಂದು ಎಫ್ಐಆರ್
ಇದನ್ನೂ ಓದಿ: ವಂಚನೆ ಪ್ರಕರಣ : ಆರೋಪಿ ಐಶ್ವರ್ಯ ಗೌಡ ವಿರುದ್ಧ ಮಾಜಿ ಸಂಸದ ಡಿ ಕೆ ಸುರೇಶ್ ದೂರು