ಬೆಂಗಳೂರು : ಸಾರ್ವಜನಿಕ ವೇದಿಕೆಯಲ್ಲಿ ಮಾಡಿದ ಭಾಷಣದಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂಬುದಾಗಿ ವಿಧಿಸಿದ್ದ ನಿರ್ಬಂಧವನ್ನು ಹೈಕೋರ್ಟ್ ಫೆ. 16ರ ವರೆಗೆ ಹೈಕೋರ್ಟ್ ವಿಸ್ತರಿಸಿದೆ.
ತನ್ನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸಬೇಕು’ ಎಂದು ಕೋರಿ ಪ್ರಭಾಕರ ಭಟ್ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಪ್ರಭಾಕರ ಭಟ್ ಪರ ಹಾಜರಾಗಿದ್ದ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್, ಆಕ್ಷೇಪಾರ್ಹ ಎನ್ನಲಾದ ಪ್ರಭಾಕರ ಭಟ್ ಅವರ ಭಾಷಣದ ಲಿಖಿತ ರೂಪವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದೂರುದಾರ ಪರ ವಕೀಲ ಎಸ್. ಬಾಲನ್, ಈ ಪ್ರತಿಯನ್ನು ಪ್ರಾಸಿಕ್ಯೂಷನ್ ನೀಡಬೇಕು. ಅರ್ಜಿದಾರರ ಪರ ವಕೀಲರು ನೀಡಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿದಾರರು ಸಲ್ಲಿಸಿರುವ ಪ್ರತಿಯನ್ನು ದೂರುದಾರರಿಗೆ ನೀಡಿದರು. ಅಲ್ಲದೆ, ಪ್ರತಿ ಅಧ್ಯಯನ ನಡೆಸಿ ತಪ್ಪುಗಳನ್ನು ಪರಿಶೀಲಿಸಲು ಸೂಚನೆ ನೀಡಿ ವಿಚಾರಣೆಯನ್ನು ಫೆಬ್ರುವರಿ 16 ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ ಏನು? : ಮಂಡ್ಯದಲ್ಲಿ ನಡೆದ ಹನುಮಾನ್ ಸಂಕೀರ್ತನ ಯಾತ್ರೆ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರು ಕೋಮು ಸಾಮರಸ್ಯ ಕದಡುವ ಭಾಷಣ ಮಾಡಿದ್ದಾರೆ’ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಜೀರ್ ಚಿಕ್ಕನೇರಳೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ಪೊಲೀಸರು IPC354, 294, 509, 506, 153A, 295 295A, 298ರ ಅಡಿ ಎಫ್‌ಐಆರ್ ದಾಖಲಿಸಿದ್ದಾರೆ. ಇದನ್ನು ರದ್ದುಗೊಳಿಸುವಂತೆ ಕೋರಿ ಪ್ರಭಾಕರ ಭಟ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ : ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ಖಂಡಿಸಿ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು