ಬೆಂಗಳೂರು: ತುಂಗಾ ಮೇಲ್ದಂಡೆ ನೀರಾವರಿ ಯೋಜನೆ ವ್ಯಾಪ್ತಿಗೆ ಒಳಪಡುವ ಮತ್ತು ದಾವಣಗೆರೆ ತಾಲೂಕು ಹೊನ್ನಾಳಿ, ಶಿವಮೊಗ್ಗ ಗ್ರಾಮಾಂತರ, ಚನ್ನಗಿರಿ, ಮಾಯಕೊಂಡ, ಹೊಳಲ್ಕೆರೆ, ಚಿತ್ರದುರ್ಗ ತಾಲೂಕುಗಳ 121 ಕೆರೆಗಳಿಗೆ ನೀರು ತುಂಬಿಸುವ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ರದ್ದುಗೊಳಿಸುವಂತೆ ಕೋರಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ರದ್ದುಪಡಿಸಿದೆ.
ದಾವಣಗೆರೆ ತಾಲೂಕು ಬೀರಗೊಂಡನಹಳ್ಳಿಯ ಬಿ ವೈ ಪರಮೇಶ್ವರಪ್ಪ, ಜಿ ಎಸ್ ಧನಂಜಯ ಮತ್ತು ಯಶೋದಮ್ಮ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಅರ್ಜಿದಾರರ ಆಕ್ಷೇಪವೇನು ?: ಈ ಯೋಜನೆಯ ಭೂ ಸ್ವಾಧೀನ ಪ್ರಕ್ರಿಯೆ ನ್ಯಾಯ ಸಮ್ಮತ ಪರಿಹಾರ ಮತ್ತು ಪುನರ್ವಸತಿ ಕಾಯ್ದೆ 2013ರ ಅನುಸಾರ ನಡೆದಿಲ್ಲ. ಜಮೀನು ವಶಪಡಿಸಿಕೊಳ್ಳಲಾದ ರೈತರಿಗೆ ಸೂಕ್ತ ಪರಿಹಾರ ದೊರೆತಿಲ್ಲ. ಇದು ಸರ್ಕಾರಕ್ಕೆ ಹೊರೆಯಾಗಿರುವ ಆರ್ಥಿಕ ಯೋಜನೆ. ಇದೊಂದು ಅನಧಿಕೃತ ಯೋಜನೆಯಾಗಿದ್ದು ಇದನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಉದ್ದೇಶಿತ ಯೋಜನೆಗೆ ವಿದ್ಯುತ್ ಒದಗಿಸಲು ಹಲವೆಡೆ ವಿದ್ಯುತ್ ಸ್ಟೇಷನ್‌ಗಳನ್ನು ನಿರ್ಮಿಸಬೇಕಿದೆ. ಇದಕ್ಕಾಗಿ ಎಂಟು ಗ್ರಾಮಗಳಲ್ಲಿ ಹಾದು ಹೋಗಲಿರುವ ಹೈಟೆನ್ಶನ್ ವೈರ್‌ನಿಂದ ಪರಿಶಿಷ್ಟ ಜಾತಿ ಮತ್ತು ವರ್ಗದವರೂ ಸೇರಿದಂತೆ ಸುಮಾರು 250 ಕ್ಕೂ ಹೆಚ್ಚು ರೈತರ ನಿತ್ಯದ ಜೀವನಕ್ಕೆ ತೊಂದೆರಯಾಗಲಿದೆ. ಈ ಯೋಜನೆಗೆ ಹೊರಡಿಸಲಾಗಿರುವ ಅಧಿಸೂಚನೆ ವಿದ್ಯುತ್ ಕಾಯ್ದೆ ಮತ್ತು ಟೆಲಿಗ್ರಾಫ್ ಕಾಯ್ದೆ ಅನುಸಾರ ಇಲ್ಲ. ಹಾಗಾಗಿ ಉದ್ದೇಶಿತ ಯೋಜನೆಯ ಹೈಟೆನ್ಶನ್ ವೈರ್ ಹಾದು ಹೋಗುವ ಮಾರ್ಗ ಬದಲಾವಣೆ ಮಾಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.
ಶ್ರೀಗಳ ಆಗ್ರಹ: ಯೋಜನೆಯಿಂದ ಹೊನ್ನಾಳಿ ತಾಲೂಕಿನ 4, ಶಿವಮೊಗ್ಗ ಗ್ರಾಮಾಂತರ 3, ಚನ್ನಗಿರಿ 72, ಹೊಳಲ್ಕೆರೆ 72 ಹಾಗೂ ಚಿತ್ರದುರ್ಗ ತಾಲೂಕಿನ 1 ಕೆರೆಗೆ ನೀರು ತುಂಬಲಿದೆ. ಇದರಿಂದ116 ಗ್ರಾಮಗಳಿಗೆ ಅನುಕೂಲವಾಗಲಿದೆ. ಈ ಯೋಜನೆಯನ್ನು ಶೀಘ್ರವೇ ಪೂರ್ಣಗೊಳಿಸಬೇಕು’ ಎಂದು ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾರ್ವಜನಿಕ ವೇದಿಕೆಗಳಲ್ಲಿ ಸಾಕಷ್ಟು ಆಗ್ರಹ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಪ್ರಾರಂಭಿಕ ವೆಚ್ಚ 460 ಕೋಟಿ ಮೊತ್ತದ ಈ ಯೋಜನೆ 2017ರ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಿದ್ದು 2022ರ ಮಾರ್ಚ್‌ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಹೊಂದಲಾಗಿತ್ತು.
ಇದನ್ನೂಓದಿ: ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ಸೇವಾ ನಿಯಮದ ದೂರು ವಿಚಾರಣೆ ಮಾಡುವ ಅಧಿಕಾರವಿಲ್ಲ: ಹೈಕೋರ್ಟ್