ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಡಾ.ಡಿ.ಎಂ. ನಂಜುಂಡಪ್ಪ ವರದಿಯನ್ನು ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿತು. ಬೀದರ್ನ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ಕೆ.ವಿ. ಅರವಿಂದ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ವಿಚಾರಣೆ ವೇಳೆ ಸರ್ಕಾರಿ ವಕೀಲರು, ''ಡಾ.ಡಿ.ಎಂ. ನಂಜುಂಡಪ್ಪ ಅವರ ಶಿಫಾರಸುಗಳು ಜಾರಿಯಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಮಾಹಿತಿ ನೀಡಲು ಈ ಹಿಂದೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿತ್ತು. ನಂಜುಂಡಪ್ಪ ವರದಿಯ ಶಿಫಾರಸುಗಳನ್ನು 2007-08ನೇ ಸಾಲಿನಿಂದಲೇ ಅನುಷ್ಠಾನ ಮಾಡಲಾಗುತ್ತಿದೆ. ಈ ಕುರಿತು ಮಾಹಿತಿಯನ್ನು ಮೆಮೊ ರೂಪದಲ್ಲಿ ಸಲ್ಲಿಸಲಾಗುವುದು. ಅದಕ್ಕಾಗಿ ಸ್ವಲ್ಪ ಕಾಲಾವಕಾಶ ನೀಡಬೇಕು'' ಎಂದು ಕೋರಿದರು.
ಇದನ್ನೂ ಓದಿ: ಪೋಕ್ಸೋ ಕೇಸ್ ರದ್ದು ಕೋರಿದ ಯಡಿಯೂರಪ್ಪ ಅರ್ಜಿ ನಾಳೆ ವಿಚಾರಣೆ - BSY POCSO Case
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ''ರಾಜ್ಯ ಸರ್ಕಾರ ಹೇಳುವಂತೆ 2007ರಿಂದಲೇ ನಂಜುಂಡಪ್ಪ ಅವರ ವರದಿಯ ಶಿಫಾರಸುಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಅರ್ಜಿದಾರರು ನೋಡಿದರೆ, ವರದಿ ಶಿಫಾರಸು ಅನುಷ್ಠಾನ ಮಾಡಲು ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ. 2014ರಲ್ಲಿಯೇ ಇದೇ ಮಾದರಿಯ ಅರ್ಜಿ ಸಲ್ಲಿಸಿ ಹೈಕೋರ್ಟ್‌ನಿಂದ ನಿರ್ದೇಶನ ಪಡೆಯಲಾಗಿದೆ. ಸರ್ಕಾರದಿಂದ ವರದಿ ಶಿಫಾರಸು ಅನುಷ್ಠಾನ ಆಗಿದೆಯೋ ಅಥವಾ ಇಲ್ಲವೋ, ಅದರ ಪ್ರಗತಿ ಏನು? ಎಂಬ ಬಗ್ಗೆ ಯಾವುದನ್ನೂ ಪರಿಶೀಲಿಸದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಮತ್ತೆ ಅದೇ ಮಾದರಿಯಲ್ಲಿ ನಿಷ್ಪ್ರಯೋಜಕ ಅರ್ಜಿ ಸಲ್ಲಿಕೆ ಮಾಡಲಾಗಿದೆ'' ಎಂದು ಮೌಖಿಕವಾಗಿ ಬೇಸರ ವ್ಯಕ್ತಪಡಿಸಿ ಅರ್ಜಿ ವಜಾಗೊಳಿಸಿತು.
ಇದನ್ನೂ ಓದಿ: ಸಬ್ ಅರ್ಬನ್ ರೈಲ್ವೆ ಯೋಜನೆ: ಜುಲೈ 12ರವರೆಗೂ 699 ಮರ ಕಡಿಯದಂತೆ ಹೈಕೋರ್ಟ್ ಸೂಚನೆ - Sub Urban Railway Project