ಬೆಂಗಳೂರು: ಬಹು ಅಂಗಾಗ ವೈಫಲ್ಯಕ್ಕೊಳಗಾದ ಅಭ್ಯರ್ಥಿಗಳಿಗೆ ಮೀಸಲಿಟ್ಟಿದ್ದ ಭೌತಶಾಸ್ತ್ರ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹವಿಲ್ಲದ ಅಭ್ಯರ್ಥಿಯ ನೇಮಕ ಮಾಡಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಮೀಸಲಿಗೆ ಅರ್ಹ ಅಭ್ಯರ್ಥಿಯನ್ನು ಭರ್ತಿ ಮಾಡಲು ನಿರ್ದೇಶನ ನೀಡಿದೆ.
ಹುದ್ದೆಗೆ ಅರ್ಹವಿದ್ದೂ, ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾಗಿದ್ದ ರವಿತೇಜ ಎಂಬುವರನ್ನು ಆಯ್ಕೆ ಮಾಡಲು ನಿರ್ದೇಶನ ನೀಡಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣದ (ಕೆಎಟಿ) ಆದೇಶ ಪ್ರಶ್ನಿಸಿ, ಕೆಇಎ ಮತ್ತು ನಿಯಮಬಾಹಿರವಾಗಿ ಹುದ್ದೆ ಪಡೆದುಕೊಂಡಿದ್ದ ಲೋಕೇಶ್ ಎ.ಜೆ. ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅನು ಶಿವರಾಮನ್ ಮತ್ತು ನ್ಯಾ.ಅನಂತ ರಾಮನಾಥ ಹೆಗಡೆ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೇ, ಬಹು ಅಂಗಾಂಗ ವೈಫಲ್ಯ ಹೊಂದಿರುವವರಿಗೆ ಈ ಹುದ್ದೆ ಮೀಸಲಾಗಿತ್ತು. ಆದರೆ, ಅರ್ಜಿ ಸಲ್ಲಿಸುವ ನಮೂನೆಯಲ್ಲಿ ಅಂಗವೈಫಲ್ಯದ ಆಧಾರದಲ್ಲಿ ಮಾತ್ರ ಉಲ್ಲೇಖಿಸಬಹುದಾಗಿತ್ತು. ಆದರೆ, ಬಹು ಅಂಗಾಂಗ ವೈಫಲ್ಯಕ್ಕೆ ಪ್ರತ್ಯೇಕ ಪಟ್ಟಿ ಒದಗಿಸಿರಲಿಲ್ಲ. ಹೀಗಾಗಿ, ಬಹು ಅಂಗಾಂಗ ವೈಫಲ್ಯಕ್ಕೆ ಗುರಿಯಾಗಿರುವವರು ಉದ್ಯೋಗ ವಂಚಿತರಾಗಿದ್ದಾರೆ. ಈ ನೇಮಕಾತಿಯಲ್ಲಿ ಶೇಕಡಾ 60ರಷ್ಟು ಅಂಗವೈಕಲ್ಯ ಬಳಲುತ್ತಿರುವವರಿಗೆ ಉದ್ಯೋಗ ನೀಡಲಾಗಿದೆ. ಆದರೆ, ಶೇಕಡಾ 63ರಷ್ಟು ಅಂಗವೈಕಲ್ಯ ಹೊಂದಿರುವವರು ಉದ್ಯೋಗದಿಂದ ವಂಚಿತರಾಗಿದ್ದಾರೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಆದ್ದರಿಂದ ಅರ್ಜಿ ನಮೂನೆಯಲ್ಲಿ ಬಹುಅಂಗಾಂಗ ವೈಫಲ್ಯವನ್ನು ನಮೂದಿಸಲು ಅವಕಾಶ ನೀಡಲು ಕೆಇಎ ವಿಫಲವಾಗಿದೆ. ಹೀಗಾಗಿ, ನಿಗದಿತ ಮೀಸಲು ಹುದ್ದೆಗೆ ಅರ್ಹ ಅಭ್ಯರ್ಥಿಯು ಉದ್ಯೋಗ ವಂಚಿತರಾಗುವಂತಾಗಿದೆ. ಹೀಗಾಗಿ, ಕೆಎಟಿ ಆದೇಶದಲ್ಲಿ ಯಾವುದೇ ದೋಷ ಕಾಣುತ್ತಿಲ್ಲ. ಆದ್ದರಿಂದ ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ಉನ್ನತ ಶಿಕ್ಷಣ ಇಲಾಖೆ ಅಧೀನದ ವಿವಿಧ ಕಾಲೇಜುಗಳಲ್ಲಿ ಖಾಲಿಯಿದ್ದ ಭೌತಶಾಸ್ತ್ರ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ ಕೆಇಎ ಅರ್ಜಿ ಅಹ್ವಾನಿಸಿದ್ದು, ಈ ಹುದ್ದೆಯನ್ನು ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾದ ಅಭ್ಯರ್ಥಿಗಳಿಗೆ ಮೀಸಲಿಟ್ಟಿತ್ತು. ಆದರೆ, ನೇಮಕಾತಿ ನಮೂನೆಯಲ್ಲಿ ಬಹು ಅಂಗಾಂಗ ವೈಫಲ್ಯವನ್ನು ಗುರುತಿಸಲು ಅವಕಾಶ ನೀಡಿರಲಿಲ್ಲ.
ಆದರೆ, ಭೌತಶಾಸ್ತ್ರ ವಿಭಾಗಕ್ಕೆ ಸಹಾಯಕ ಪ್ರಾಧ್ಯಾಪಕರ ಹುದ್ದೆಯ ಆಯ್ಕೆಗೆ ರವಿತೇಜ ಆಯ್ಕೆಯಾಗಲು ಎಲ್ಲ ಅರ್ಹತೆಗಳಿದ್ದರೂ, ಲೋಕೇಶ್ ಎಂಬುವರನ್ನು ನೇಮಕ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ, ರವಿತೇಜ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣಕ್ಕೆ (ಕೆಎಟಿ) ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೆಎಟಿ ಬಹು ಅಂಗಾಗಳ ವೈಫಲ್ಯಗಳನ್ನು ಪರಿಗಣಿಸಿ ಹುದ್ದೆಗೆ ರವಿತೇಜ ಅವರನ್ನು ನೇಮಕ ಮಾಡಲು ನಿರ್ದೇಶನ ನೀಡಿತ್ತು. ಜೊತೆಗೆ, ಲೋಕೇಶ್ ಅವರನ್ನು ನೇಮಕ ಮಾಡಿದ್ದ ಆದೇಶವನ್ನು ರದ್ದುಪಡಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕೆಇಎ ಮತ್ತು ಲೋಕೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೆ ಕೋರಿದ್ದ ಶಾಸಕರ ಅರ್ಜಿ ವಜಾ - High court