ಬೆಂಗಳೂರು: ಅಸಾಧಾರಣ ಸಂದರ್ಭಗಳಲ್ಲಿ ಹೊರತುಪಡಿಸಿ, ಇನ್ನುಳಿದಂತೆ ಏಕಪಕ್ಷೀಯ ವಿಚ್ಛೇದನ ಆದೇಶವನ್ನು ಪರಿಗಣಿಸಲಾಗದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಮೃತ ಸೈನಿಕನ ವಿಚ್ಛೇದಿತ ಪತ್ನಿಗೆ ಎಲ್ಲ ರೀತಿಯ ವಿಧವಾ ಸೌಲಭ್ಯಗಳನ್ನು ಕಲ್ಪಿಸಲು ಸೇನಾ ಪ್ರಾಧಿಕಾರಕ್ಕೆ ಆದೇಶ ನೀಡಿದೆ.
ಮೃತ ಮಾಜಿ ಸೈನಿಕನ ಪತ್ನಿಗೆ ವಿಧವಾ ಗುರುತಿನ ಚೀಟಿ ನಿರಾಕರಿಸಿದ್ದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ವಿಭಾಗದ ಜಂಟಿ ನಿರ್ದೇಶಕರ ಕ್ರಮ ಪ್ರಶ್ನಿಸಿ, ಸೈನಿಕನ ಪತ್ನಿ ಪಾರ್ವತಮ್ಮ ಎಂಬವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಮುಂದಿನ ಎರಡು ತಿಂಗಳಲ್ಲಿ ಅರ್ಜಿದಾರರಿಗೆ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದೆ. ಮಾಜಿ ಸೈನಿಕನ ಪತ್ನಿಯಾಗಿದ್ದರೂ ಸೌಲಭ್ಯಗಳನ್ನು ನೀಡಲು ನಿರಾಕರಿಸುವುದಕ್ಕೆ ವಿಚ್ಛೇದಿತೆ ಎಂಬ ಕಳಂಕ ಹೊರಿಸಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿತು.
ಪ್ರಸ್ತುತ ಪ್ರಕರಣದಲ್ಲಿ ಈ ಹಿಂದೆ ಏಕಪಕ್ಷೀಯವಾಗಿ ಆದೇಶ ನೀಡಲಾಗಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣಾ ಹಂತದಲ್ಲಿರುವ ಸಂದರ್ಭದಲ್ಲಿ ಪತಿ ಮೃತಪಟ್ಟಿದ್ದಾರೆ. ಹೀಗಾಗಿ ಅರ್ಜಿ ಮುಕ್ತಾಯಗೊಳಿಸಲಾಗಿದೆ. ಇದಕ್ಕಾಗಿ ಅರ್ಜಿದಾರರನ್ನು ವಿಚ್ಛೇದಿತೆ ಎಂಬುದಾಗಿ ನೋಡುವಂತಿಲ್ಲ ಎಂದು ಪೀಠ ಹೇಳಿದೆ.
ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿ ಇತರೆ ಸಂದರ್ಭಗಳಲ್ಲಿ ಕಾನೂನು ಪ್ರಕಾರ ಇದನ್ನು ಪರಿಗಣಿಸಲಾಗದು. ಆದ್ದರಿಂದ, ಅರ್ಜಿದಾರರ ಮನೆಯಲ್ಲಿ ದುಡಿಯುತ್ತಿದ್ದ ಏಕೈಕ ವ್ಯಕ್ತಿಯನ್ನು ಕಳೆದುಕೊಂಡಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಪ್ರತಿವಾದಿಗಳು ಸಹಾನುಭೂತಿ ತೋರಿಸಬೇಕು ಎಂದು ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರಾದ ಪಾರ್ವತಮ್ಮ ಸೈನಿಕರಾಗಿದ್ದ ಎಲ್.ರಾಮಕೃಷ್ಣ ಎಂಬವರನ್ನು 1987ರಲ್ಲಿ ವಿವಾಹವಾಗಿದ್ದರು. 1995ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ಸಂದರ್ಭದಲ್ಲಿ ರಾಮಕೃಷ್ಣ ಸೇನೆಯಲ್ಲಿ ಸೇವೆಯಲ್ಲಿದ್ದ ಪರಿಣಾಮ ಅರ್ಜಿದಾರರನ್ನು ಆತನ ತಂದೆ ತಾಯಿಯೊಂದಿಗೆ ಬಿಟ್ಟಿದ್ದರು. ಅಲ್ಲದೆ, ವರ್ಷಕ್ಕೆ ಎರಡು ತಿಂಗಳ ಕಾಲ ರಜೆಗೆ ಮನೆಗೆ ಬರುತ್ತಿದ್ದರು. ಈ ನಡುವೆ 2016ರಲ್ಲಿ ಸೇನೆಗೆ ರಾಜೀನಾಮೆ ನೀಡಿ ಮನೆಗೆ ಹಿಂದಿರುಗಿದ್ದರು. ಇದಾದ ಬಳಿಕ ದಂಪತಿ ನಡುವೆ ಮನಸ್ತಾಪಕ್ಕೆ ಕಾರಣವಾಗಿತ್ತು. ಮುಂದುವರೆದು ಅರ್ಜಿದಾರರು, ರಾಮಕೃಷ್ಣ ಮತ್ತವರ ಕುಟುಂಬಸ್ಥರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ನಡುವೆ ರಾಮಕೃಷ್ಣ ಅರ್ಜಿದಾರರಾದ ಪಾರ್ವತಮ್ಮರಿಂದ ವಿಚ್ಛೇದನ ಮಂಜೂರು ಮಾಡುವಂತೆ ಕೋರಿ 2017ರಲ್ಲಿ(ಮದುವೆಯಾದ 30 ವರ್ಷಗಳ ಬಳಿಕ) ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದರೂ, ಪಾರ್ವತಮ್ಮ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಏಕಪಕ್ಷೀಯವಾಗಿ ವಿವಾಹ ವಿಚ್ಛೇದನ ಮಂಜೂರು ಮಾಡಿ ಆದೇಶಿಸಿತ್ತು.
ವಿಚ್ಛೇದನ ಮಂಜೂರು ಮಾಡಿರುವ ಅಂಶ ಗೊತ್ತಾಗುತ್ತಿದ್ದಂತೆ ಅರ್ಜಿದಾರರಾದ ಪಾವರ್ತಮ್ಮ, ವಿಚ್ಛೇದನ ಆದೇಶವನ್ನು ಹಿಂಪಡೆಯುವಂತೆ ಮನವಿ ಮಾಡಿದ್ದರು. ಅರ್ಜಿ ವಿಚಾರಣಾ ಹಂತದಲ್ಲಿರುವ ಸಂದರ್ಭದಲ್ಲಿಯೇ ರಾಮಕೃಷ್ಣ ಮೃತಪಟ್ಟಿದ್ದರು. ಪರಿಣಾಮ ವಿವಾಹ ವಿಚ್ಛೇದನ ರದ್ದುಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ಮುಕ್ತಾಯಗೊಳಿಸಿತ್ತು.
ಇದಾದ ಬಳಿಕ ತನಗೆ ಮೃತ ಮಾಜಿ ಸೈನಿಕನ ಪತ್ನಿ(ವಿಧವೆ) ಎಂಬ ಹೆಸರಿನ ಗುರುತಿನ ಚೀಟಿ ನೀಡುವಂತೆ ಕೋರಿ ಬೆಂಗಳೂರಿನ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ವಿಭಾಗಕ್ಕೆ ಮನವಿ ಮಾಡಿದ್ದರು. ಈ ಮನವಿಯನ್ನು ತಿರಸ್ಕರಿಸಿದ್ದ ಪರಿಣಾಮ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಬಾಲ ನ್ಯಾಯ ಮಂಡಳಿಗೆ ಸಿಬ್ಬಂದಿ ಒದಗಿಸಲು 4 ವಾರಗಳ ಗಡುವು ನೀಡಿದ ಹೈಕೋರ್ಟ್ - Juvenile Justice Act