ಬೆಂಗಳೂರು: ಕಿರುಕುಳ ನೀಡುತ್ತಿರುವ ಪೊಲೀಸರಿಂದ ನನ್ನನ್ನು ಕಾಪಾಡಿ ಎಂದು ನ್ಯಾಯಪೀಠದ ಮುಂದೆ ಕಣ್ಣೀರಿಟ್ಟಿದ್ದ ಕೆಪಿಟಿಸಿಎಲ್ ಸೊರಬ ಕಾರ್ಯಕಾರಿ ಸಹಾಯಕ ಎಂಜಿನಿಯರ್ ಎಂ.ಜಿ.ಶಾಂತಕುಮಾರಸ್ವಾಮಿ ವಿರುದ್ಧ ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ಕಾಯ್ದೆ ಆರೋಪಗಳಡಿ ದಾಖಲಾಗಿರುವ ಪ್ರಕರಣದ ವಿಚಾರಣೆಗೆ ತಡೆ ನೀಡಲು ಹೈಕೋರ್ಟ್ ಬುಧವಾರ ನಿರಾಕರಿಸಿತು.
ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ಕಾಯ್ದೆಯಡಿ ತನ್ನ ವಿರುದ್ಧ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿ ಶಾಂತಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ನಡೆಸಿತು.
ವಿಚಾರಣೆಯ ವೇಳೆ ಸರ್ಕಾರದ ಪರ ವಕೀಲರು ಹಾಜರಾಗಿ, ಹೈಕೋರ್ಟ್ ಹಿಂದಿನ ಸೂಚನೆಯಂತೆ ಅರ್ಜಿದಾರರಿಗೆ ಸಾಗರ ಪೊಲೀಸರು ಕಿರುಕುಳ ನೀಡಿರುವ ಬಗ್ಗೆ ಮಾಹಿತಿ ಕೇಳಲಾಗಿದೆ. ಆ ಕುರಿತ ವರದಿ ಬರಬೇಕಿದೆ. ಅದನ್ನು ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಕೋರಿದರು.
ಇದಕ್ಕೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ವಿರುದ್ಧದ ಎಫ್‌ಐಆರ್‌ಗಳಿಗೆ ಸಂಬಂಧಿಸಿದ ತನಿಖೆಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದರು. ಅದಕ್ಕೆ ನಿರಾಕರಿಸಿದ ನ್ಯಾಯಪೀಠ, ತನಿಖೆಗೆ ತಡೆಯಾಜ್ಞೆ ನೀಡಲಾಗದು. ತನಿಖೆ ಮುಂದುವರಿಯಲಿ. ತನಿಖೆಯ ವೇಳೆ ಅರ್ಜಿದಾರರ ವಿರುದ್ಧ ಪೊಲೀಸರು ಯಾವುದೇ ಬಲವಂತದ ಕ್ರಮ ಜರುಗಿಸಬಾರದು. ಅರ್ಜಿದಾರರೂ ಸಹ ಪೊಲೀಸರ ತನಿಖೆಗೆ ಸಹಕರಿಸಬೇಕು. ಒಂದೊಮ್ಮೆ ಪೊಲೀಸರಿಂದ ಯಾವುದಾದರೂ ಸಮಸ್ಯೆ ಉಂಟಾದರೆ, ಆಗ ಅರ್ಜಿದಾರರು ನ್ಯಾಯಾಲಯಕ್ಕೆ ಬರಬಹುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಇದನ್ನೂ ಓದಿ: ಪೊಲೀಸರ ಕಿರುಕುಳದಿಂದ ಕಾಪಾಡಿ ಎಂದು ಕೋರಿದ್ದ ಎಂಜಿನಿಯರ್ ವಿರುದ್ಧವೇ ವಕೀಲರಿಂದ ಆರೋಪ - High Court