ಬೆಂಗಳೂರು: ಬಿಟ್ ಕಾಯಿನ್ ಹಗರಣದಲ್ಲಿ ಆರೋಪಿಯಾಗಿದ್ದು, ಬಂಧನ ಭೀತಿಯಲ್ಲಿದ್ದ ಪೊಲೀಸ್ ಇನ್ಸ್ಪೆಕ್ಟರ್ ಬಿ.ಎಂ.ಪ್ರಶಾಂತ್ ಬಾಬು ಎಂಬವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ಹೈಕೋರ್ಟ್ ಇಂದು ನಿರಾಕರಿಸಿತು. ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ತಾಂತ್ರಿಕ ಸಹಕಾರ ಕೇಂದ್ರದ ಪ್ರಭಾರ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ಪ್ರಶಾಂತ್ ಬಾಬು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ನ್ಯಾಯಪೀಠ ಅರ್ಜಿ ತಿರಸ್ಕರಿಸಿದೆ.
ಬಿಟ್ ಕಾಯಿನ್ ಪ್ರಕರಣದ ಪ್ರಮುಖ ಆರೋಪಿ ಶ್ರೀಕಿಯಿಂದ ವಶಪಡಿಸಿಕೊಂಡ ಆ್ಯಪಲ್ ಕಂಪೆನಿಯ ಮ್ಯಾಕ್‌ಬುಕ್‌ನಲ್ಲಿ ಇರುವ ಫೈಲ್‌ಗಳು ಮತ್ತು ಫೋಲ್ಡರ್ ಗಳನ್ನು ಅಳಿಸಬಹುದಾದಂತಹ ಡೆಟಾ-ವೈಫಿಂಗ್ ಟೂಲ್ ಅನ್ನು ಇನ್‌ಸ್ಟಾಲ್ ಮಾಡಲಾಗಿದೆ. ಈ ಟೂಲ್ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿಯೂ ಅಳಿಸಿದ ಪೋಲ್ಡರ್‌ಗಳನ್ನು ಮರು ಪಡೆಯುವುದಕ್ಕೆ ಸಾಧ್ಯವಾಗದಂತೆ ಮಾಡುತ್ತದೆ. ಈ ಎಲ್ಲ ದತ್ತಾಂಶಕ್ಕೆ ಬಳಸಿರುವ ಯೂಸರ್‌ನೇಮ್ ಅರ್ಜಿದಾರ ಪ್ರಶಾಂತ್ ಬಾಬು ಹೆಸರಿನಲ್ಲಿದ್ದು, ಸುಮಾರು 16 ಫೈಲ್‌ಗಳನ್ನು ಅಳಿಸಿಹಾಕಲಾಗಿದೆ ಎಂಬ ಅಂಶವನ್ನು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ನೀಡಿದೆ ಎಂದು ಪೀಠ ತಿಳಿಸಿತು.
ಅಲ್ಲದೆ, ಅರ್ಜಿದಾರರು ಬಿಟ್ ಕಾಯಿನ್ ತನಿಖೆ ನಡೆಸುತ್ತಿರುವ ಸಂಸ್ಥೆಯ ತಾಂತ್ರಿಕ ಸಹಕಾರ ಕೇಂದ್ರದ ಮುಖ್ಯಸ್ಥರಾಗಿದ್ದಾರೆ. ಹೀಗಾಗಿ ಅವರು ತಮ್ಮ ವಿರುದ್ಧದ ಆರೋಪಕ್ಕೆ ಸಮಂಜಸವಾದ ವಿವರಣೆ ನೀಡುವುದಕ್ಕೆ ಜವಾಬ್ದಾರರು ಎಂದು ಹೇಳಿದ ಪೀಠ ಅರ್ಜಿ ವಜಾಗೊಳಿಸಿತು. ಸರ್ಕಾರದ ಪರವಾಗಿ ತೇಜಸ್ ಎನ್ ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ: 2020ರಲ್ಲಿ ಮೊದಲ ಬಾರಿಗೆ ಬಿಟ್ ಕಾಯಿನ್ ಪ್ರಕರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಎಂಬಾತನ ವಿರುದ್ಧ ಬೆಂಗಳೂರಿನ ಕಾಟನ್‌ಪೇಟೆ, ಅಶೋಕನಗರ, ಕೆಜಿ ನಗರ ಮತ್ತು ಸೈಬರ್ ಕ್ರೈಂ ಠಾಣೆಗಳಲ್ಲಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಈ ಎಲ್ಲಾ ಪ್ರಕರಣಗಳನ್ನು ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸಲಾಗಿತ್ತು. ಶ್ರೀಕಿ ಅವರ ಆ್ಯಪಲ್ ಮ್ಯಾಕ್‌ಬುಕ್ ಅನ್ನು ಅರ್ಜಿದಾರ ಪ್ರಶಾಂತ್ ಬಾಬು ಕೊಠಡಿಯಲ್ಲಿದ್ದ ವೇಳೆ ಪರಿಶೀಲಿಸಿದ್ದರು. ಈ ವೇಳೆ ಅರ್ಜಿದಾರರ ಡೆಸ್ಕ್‌ಟಾಪ್ (ಕಂಪ್ಯೂಟರ್)ಗೆ ಬಿಟ್ ಕಾಯಿನ್‌ಗಳನ್ನು ವರ್ಗಾಯಿಸಿರುವ ಆರೋಪವಿತ್ತು. ಈ ಸಂಬಂಧ ವಿಜ್ಞಾನ ಪ್ರಯೋಗಾಲಯ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡಿತ್ತು. ಅಲ್ಲದೆ, ಮ್ಯಾಕ್‌ಬುಕ್‌ನಲ್ಲಿದ್ದ 4 ಸಾವಿರ ಬಿಟ್ ಕಾಯಿನ್‌ಗಳನ್ನು ವರ್ಗಾವಣೆ ಮಾಡಿದ್ದು, ಆ ಸಂದರ್ಭದಲ್ಲಿ ಒಂದು ಬಿಟ್ ಕಾಯಿನ್ ಮೌಲ್ಯ ಸುಮಾರು 29 ಸಾವಿರ ಡಾಲರ್ ಅಥವಾ 21.2 ಲಕ್ಷ ರೂ.ಗಳಿಗೆ ಸಮನಾಗಿತ್ತು. ವರ್ಗಾವಣೆಗೊಂಡ ಒಟ್ಟು ಬಿಟ್ ಕಾಯಿನ್‌ಗಳ ಮೌಲ್ಯ 850 ಕೋಟಿ ರೂ.ಗಳಾಗಿತ್ತು. ಅಲ್ಲದೆ, ಪ್ರಕರಣ ಸಂಬಂಧ ಅರ್ಜಿದಾರರನ್ನು ಈಗಾಗಲೇ ಏಳು ದಿನಗಳ ಕಾಲ ವಶಕ್ಕೆ ಪಡೆದು ಹೇಳಿಕೆ ದಾಖಲಿಸಿಕೊಂಡಿದ್ದರು. ಈ ನಡುವೆ 2024ರ ಜೂನ್ 24 ರಂದು ತನಿಖಾಧಿಕಾರಿಯ ಮುಂದೆ ಹಾಜರಾಗಲು ನೋಟಿಸ್ ನೀಡಲಾಗಿತ್ತು. ಇದರಿಂದ ಬಂಧನ ಭೀತಿಯಲ್ಲಿದ್ದ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.