ಬೆಂಗಳೂರು: ಮೀಸಲು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಅಭ್ಯರ್ಥಿಯ ಜಾತಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗುವ ಅರ್ಜಿಗಳನ್ನು ನಿರ್ಧರಿಸಲು ಕರ್ನಾಟಕ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿಗಳ ಮೀಸಲಾತಿ ಇತ್ಯಾದಿ) ಕಾಯಿದೆ - 1990 ಅಡ್ಡಿಪಡಿಸುವುದಿಲ್ಲ ಎಂದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಜಗಳೂರಿನ ಕಾಂಗ್ರೆಸ್ ಶಾಸಕ ಬಿ.ದೇವೇಂದ್ರಪ್ಪ ಆಯ್ಕೆಯನ್ನು ಪ್ರಶ್ನಿಸಿ ಜಿ.ಸ್ವಾಮಿ ಎಂಬವರು ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿದಂತೆ ಜಾತಿ ಪ್ರಮಾಣ ಪತ್ರವನ್ನು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ (ಡಿಸಿವಿಸಿ) ನಿರ್ಧರಿಸಬೇಕು ಎಂದು ದೇವೇಂದ್ರಪ್ಪ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಸಂಸತ್ತು ಮಾಡಿದ ಪ್ರಜಾಪ್ರತಿನಿಧಿ ಕಾಯಿದೆಯು ಚುನಾವಣೆಗಳನ್ನು ನಿಯಂತ್ರಿಸುತ್ತದೆ. ಆದರೆ, ಈ ಕಾಯಿದೆಯಡಿ ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವನ್ನು ನೀಡಿಲ್ಲ. ಡಿಸಿವಿಸಿಯು ಶಾಸನಬದ್ಧವಾದ ಸಂಸ್ಥೆಯಾಗಿದೆ. ಇದರ ಅಧಿಕಾರ ವ್ಯಾಪ್ತಿ ಕರ್ನಾಟಕ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿಗಳ ಮೀಸಲಾತಿ ಇತ್ಯಾದಿ) ಕಾಯಿದೆ-1990 ಅಡಿ ಬರುವ ಜಾತಿ ಪ್ರಮಾಣ ಪತ್ರಗಳಿಗೆ ಮಾತ್ರ ಸೀಮಿತವಾಗಿದೆ. ಆದರೆ, ಪ್ರಜಾಪ್ರತಿನಿಧಿ ಕಾಯಿದೆ 1951ರ ಅಡಿಯಲ್ಲಿ ಹೈಕೋರ್ಟ್‌ಗೆ ನೀಡಲಾದ ಅಧಿಕಾರ ವ್ಯಾಪ್ತಿಯನ್ನು 1990ರ ಕಾಯ್ದೆ ಮೊಟಕುಗೊಳಿಸುವುದಿಲ್ಲ ಎಂದು ಪೀಠ ಹೇಳಿದೆ.
ಆದ್ದರಿಂದ, ಅರ್ಜಿದಾರರ ಅಭ್ಯರ್ಥಿಯ ಜಾತಿಗೆ ಸಂಬಂಧಿಸಿದ ವಿವಾದವನ್ನು ಹೈಕೋರ್ಟ್ ನಿರ್ಧರಿಸಬಹುದಾಗಿದೆ ಎಂದು ಪೀಠ ಹೇಳಿದೆ. ಅಲ್ಲದೆ, ಒಬ್ಬ ವ್ಯಕ್ತಿಯ ಜಾತಿಯು ವಿಭಿನ್ನ ಉದ್ದೇಶಗಳಿಗಾಗಿ ವಿಭಿನ್ನವಾಗಿರಲು ಸಾಧ್ಯವೇ ಇಲ್ಲ. ಒಬ್ಬ ವ್ಯಕ್ತಿಯನ್ನು 'ಅ' ಎಂಬ ಜಾತಿ ಎಂದು ಪ್ರಮಾಣೀಕರಿಸಿ ಪ್ರಮಾಣಪತ್ರ ನೀಡಿದರೆ, ಅದು ಆ ವ್ಯಕ್ತಿಯ ಎಲ್ಲಾ ಉದ್ದೇಶಗಳಿಗೂ 'ಅ' ಆಗಿರಬೇಕು. ತನ್ನ ಜಾತಿಯು ಒಂದು ಉದ್ದೇಶಕ್ಕಾಗಿ 'ಅ' ಮತ್ತು ಮತ್ತೊಂದು ಉದ್ದೇಶಕ್ಕಾಗಿ 'ಬ' ಎಂದು ಹೇಳಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ಇದನ್ನೂ ಓದಿ: ಟಿಕೆಟ್ ಖರೀದಿ ಸ್ಥಳ ದಾಟಿ ಪ್ರಯಾಣಿಸಿದ ವೇಳೆ ವ್ಯಕ್ತಿ ಮೃತಪಟ್ಟರೂ ರೈಲ್ವೆ ಪರಿಹಾರ ನೀಡಬೇಕು: ಹೈಕೋರ್ಟ್
ಜೊತೆಗೆ, 1951ರ ಕಾಯ್ದೆಯಡಿ ಹೈಕೋರ್ಟ್‌ಗೆ ನೀಡಲಾದ ಅಧಿಕಾರ ವ್ಯಾಪ್ತಿಯನ್ನು ಡಿಸಿವಿಸಿಯ ನಿರ್ಧಾರದಂತೆ ಪರಿಗಣಿಸುವುದಕ್ಕೆ ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ಜಗಳೂರು ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಆದರೆ, ದೇವೇಂದ್ರಪ್ಪ ಪರಿಶಿಷ್ಟ ಪಂಗಡಕ್ಕೆ ಸೇರಿದವರಲ್ಲ. ಇತರ ಹಿಂದುಳಿದ ಸಮುದಾಯಕ್ಕೆ (ಒಬಿಸಿ) ಸೇರಿದವರು ಎಂದು ಆರೋಪಿಸಿ ಸ್ವಾಮಿ ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ದೇವೇಂದ್ರಪ್ಪ ಪರ ವಕೀಲರು, ''ಜಿಲ್ಲಾ ಜಾತಿ ಪರಿಶೀಲನಾ ಸಮಿತಿ (ಡಿಸಿವಿಸಿ) ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸುವವರೆಗೆ ಅದು ಮುಂದುವರೆಯಲಿದೆ. ಕರ್ನಾಟಕ ಪರಿಶಿಷ್ಟ ಜಾತಿಗಳು ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮೀಸಲಾತಿ ಇತ್ಯಾದಿ) ಕಾಯ್ದೆಯಡಿ ರಚಿಸಲಾಗಿರುವ ಈ ಸಮಿತಿಗೆ ಮಾತ್ರ ಜಾತಿಯ ಸಿಂಧುತ್ವ ನಿರ್ಧರಿಸುವ ಅಧಿಕಾರವಿದೆ'' ಎಂದು ವಾದ ಮಂಡಿಸಿದ್ದರು.
ಇದನ್ನೂ ಓದಿ: ಡಿ.29ರ ಕೆಎಎಸ್ ಪರೀಕ್ಷೆಗೆ ವಿಧಿಸಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್