ಬೆಂಗಳೂರು: ಪರಪ್ಪನ ಅಗ್ರಹಾರದ ಕಾರಾಗೃಹದಲ್ಲಿದ್ದುಕೊಂಡು ನಿಷೇಧಿತ ಲಷ್ಕರ್ ಎ-ತೋಯ್ಬಾ ಸಂಘಟನೆ ಸಂಪರ್ಕಿಸಿ ಭಯೋತ್ಪಾದನೆ ಚಟುವಟಿಕೆಗಳಿಗೆ ಸಂಚು ರೂಪಿಸಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಪಾಕಿಸ್ತಾನದ ಪ್ರಜೆ ಸೇರಿದಂತೆ ಮೂವರನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಹೈಕೋರ್ಟ್ ಆದೇಶಿಸಿದೆ.
ಬೆಂಗಳೂರಿನ ನಿವಾಸಿಗಳಾದ ಸಯ್ಯದ್ ಅಬ್ದುಲ್ ರೆಹಮಾನ್, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಅಪ್ಸರ್ ಪಾಷಾ ಮತ್ತು ಪಾಕಿಸ್ತಾನದ ಕರಾಚಿಯ ನಿವಾಸಿ ಮೊಹಮ್ಮದ್ ಫಹದ್ ಹೈ ಅಲಿಯಾಸ್ ಮೊಹಮ್ಮದ್ ಕೋಯಾ ಅವರು ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾಯಮೂರ್ತಿ ಜೆ.ಎಂ. ಖಾಝೀ ಅವರಿದ್ದ ನ್ಯಾಯಪೀಠ, ಆರೋಪಿಗಳು ಭಯೋತ್ಪಾದನೆ ಚಟುವಟಕೆಗಳನ್ನು ನಡೆಸುವ ಸಂಘಟನೆಯೊಂದಿಗೆ ಕೈ ಜೋಡಿಸಿರುವುದನ್ನು ಸಾಬೀತು ಪಡಿಸುವುದಕ್ಕೆ ತನಿಖಾಧಿಕಾರಿಗಳು ಸಲ್ಲಿಸಿರುವ ಸಾಕ್ಷ್ಯಾಧಾರಗಳನ್ನು ಸಾಕಾಗುವುದಿಲ್ಲ ಎಂದು ತಿಳಿಸಿದೆ. ಜೊತೆಗೆ, ಪಾಕಿಸ್ತಾನದ ಪ್ರಜೆಯನ್ನು ಜೈಲಿನಿಂದ ಬಿಡುಗಡೆಯಾದ ಬಳಿಕ ಗಡಿಪಾರು ಮಾಡುವಂತೆ ತಿಳಿಸಿದೆ.
ಅಲ್ಲದೆ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) 1967ರಡಿ ಪ್ರಾಸಿಕ್ಯೂಷನ್, ಆರೋಪಿಗಳ ವಿಚಾರಣೆಗೆ ಪೂರ್ವಾನುಮತಿ ಪಡೆಯುವ ಪ್ರಕ್ರಿಯೆಯಲ್ಲಿ ಆಗಿರುವ ಲೋಪದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಲಾಗುತ್ತಿದೆ ಎಂದು ನ್ಯಾಯಾಲಯ ಆದೇಶ ನೀಡಿದೆ. ಆದರೆ, ಅಕ್ರಮವಾಗಿ ಬಂದೂಕು ಹೊಂದಿದ್ದ ರೆಹಮಾನ್ ಅವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ವಿಧಿಸಿದ್ದ ಶಿಕ್ಷೆಯನ್ನು ನ್ಯಾಯಪೀಠ ಎತ್ತಿ ಹಿಡಿದಿದೆ.
ಜೊತೆಗೆ, ತನಿಖೆ ವೇಳೆ ಸಂಗ್ರಹಿಸಲಾಗಿದ್ದ ದಾಖಲೆಗಳನ್ನು ಪರಿಶೀಲನಾ ಸಮಿತಿ ಮುಂದೆ ಸಲ್ಲಿಸಬೇಕಾಗಿರಲಿಲ್ಲ ಅಥವಾ ಆ ವರದಿಯನ್ನು ಉಲ್ಲೇಖಿಸಿದ್ದರೂ ಅದಕ್ಕೆ ಪೂರ್ವಾನುಮತಿ ನೀಡಬೇಕಾದ ಸಕ್ಷಮ ಪ್ರಾಧಿಕಾರದ ಮುಂದೆ ಇಡಬೇಕಾಗಿರಲಿಲ್ಲ. ಈ ಎಲ್ಲಾ ಅಂಶ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನಂತರ ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)- 1967ರ ಸೆಕ್ಷನ್ 13, 17, 18 ಮತ್ತು 18 'ಬಿ' ಅಡಿ ಶಿಕ್ಷೆ ಊರ್ಜಿತವಾಗುವುದಿಲ್ಲ. ಪಾಕಿಸ್ತಾನದ ಭಯೋತ್ಪಾದನಾ ಸಂಘಟನೆಗಳಿಗೆ ಯುವಕರನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಸಾಬೀತುಪಡಿಸಲು ತನಿಖೆಯಲ್ಲಿ ಯಾವುದೇ ಅಂಶಗಳು ಕಂಡು ಬಂದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ: ಕ್ರಿಮಿನಲ್ ಪ್ರಕರಣದಲ್ಲಿ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ ರೆಹಮಾನ್ ಮತ್ತಿತರರು ಕಾರಾಗೃಹದಲ್ಲಿದ್ದುಕೊಂಡೇ ಭಯೋತ್ಪಾದಕ ಸಂಘಟನೆ ಎಲ್‌ಇಟಿ ಜೊತೆ ಸೇರಿ ರಾಜ್ಯದ ಹಲವೆಡೆ ಭಯೋತ್ಪಾದಕ ದಾಳಿಗಳನ್ನು ನಡೆಸಲು ಸಂಚು ರೂಪಿಸಿದ್ದರು ಎಂಬ ಆರೋಪ 2012ರ ಮೇ 7ರಂದು ಕೇಳಿಬಂದಿತ್ತು.
ಈ ಸಂಬಂಧ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಘವೇಂದ್ರ ಔರಾದ್ಕರ್ ಅವರ ಹೇಳಿಕೆಯನ್ನಾಧರಿಸಿ ಬಂಧಿಸಿದ್ದ ಆರೋಪಿಗಳನ್ನು ನ್ಯಾಯಪೀಠ ಆರೋಪ ಮುಕ್ತರನ್ನಾಗಿಸಿ ಆದೇಶ ಹೊರಡಿಸಿದೆ. ರೆಹಮಾನ್ ಅವರು ಪಾಷಾ ಮತ್ತು ಖೋಯಾ ಮೂಲಕ ಲಷ್ಕರ್-ಎ-ತೊಯ್ಬಾ ಉಗ್ರರನ್ನು ಪರಿಚಯ ಮಾಡಿಕೊಂಡಿದ್ದರು. ಬೆಂಗಳೂರಿನಲ್ಲಿ ಸ್ಫೋಟ ಸೇರಿದಂತೆ ಭಯೋತ್ಪಾದಕ ಚಟುವಟಿಕೆಗಳಿಗೆ ಯುವಕರನ್ನು ನೇಮಕ ಮಾಡಲು ಎಲ್ಇಟಿ ನಡೆಸಿದ ಪಿತೂರಿಯಾಗಿದೆ ಎಂದು ಪೊಲೀಸರು 2012ರ ಮೇ 7ರಂದು ಅವರನ್ನು ವಶಪಡಿಸಿಕೊಂಡಿದ್ದರು.
ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯವು ಈ ಮೂವರನ್ನು ಕ್ರಿಮಿನಲ್ ಪಿತೂರಿ ಮತ್ತು ದೇಶದ ವಿರುದ್ಧದ ಚಟುವಟಿಕೆಗಳನ್ನು ನಡೆಸಿದ ಆರೋಪದಲ್ಲಿ ತಪ್ಪಿತಸ್ಥರೆಂದು ಘೋಷಿಸಿತ್ತು. ಇದಕ್ಕಾಗಿ ಅವರಿಗೆ ಜೀವಾವಧಿ ಶಿಕ್ಷೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಹೆಚ್ಚುವರಿ 5-10 ವರ್ಷಗಳ ಶಿಕ್ಷೆ ವಿಧಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮೂರು ಮಂದಿ ಆರೋಪಿಗಳು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ: 'ನೀವು ನನ್ನ ಹೃದಯದಲ್ಲಿದ್ದೀರಿ': ಅಭಿಮಾನಿಗಳಿಗೆ ಸಿಗ್ನಲ್ ಕೊಟ್ಟ ದರ್ಶನ್: ನಟನನ್ನು ಭೇಟಿಯಾದ ಹರಿಕೃಷ್ಣ, ಶೈಲಜಾನಾಗ್