ಬೆಳಗಾವಿ: ಜಿಲ್ಲೆಯಲ್ಲಿ ಜು.29ರವರೆಗೆ ವಾಡಿಕೆಯಂತೆ 141 ಎಂಎಂ ಮಳೆ ಆಗಬೇಕಿತ್ತು. ಆದರೆ, 148 ಎಂಎಂ ಮಳೆ ಆಗಿದ್ದರಿಂದ ಬಿತ್ತನೆ ಮಾಡಿದ್ದ ಭೂಮಿಯಲ್ಲಿನ ಬೆಳೆಗಳಿಗೆ ಗೊಬ್ಬರ ಕಟ್ಟುವುದು, ಕಳೆ ಕೀಳುವುದು ಹಾಗೂ ಎಡೆ ಹೊಡೆಯುವುದರಲ್ಲಿ ರೈತರು ಮಗ್ನರಾಗಿದ್ದಾರೆ. ಇನ್ನು ರೈತರಿಗೆ ನೆರವಾಗುವ ಉದ್ದೇಶದಿಂದ ಕೃಷಿ ಇಲಾಖೆ ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಮುಂದಾಗಿದ್ದಾರೆ.
2024ರ ಮುಂಗಾರು ಹಂಗಾಮಿನಲ್ಲಿ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟವಾದ ರೈತರಿಗೆ ಪರಿಹಾರ ನೀಡುವ ಉದ್ದೇಶದಿಂದ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಯೂನಿವರ್ಸಲ್ ಸೊಂಪೋ ಜನರಲ್ ಇನ್ಶೂರೆನ್ಸ್ ಕಂಪನಿ ಎಂಬ ಸಂಸ್ಥೆ ನೇಮಿಸಲಾಗಿದೆ. ಕೃಷಿ ಬೆಳೆಗಳಿಗೆ ವಿಮಾ ಮೊತ್ತಕ್ಕೆ ಶೇ.2ರಷ್ಟು ಹಾಗೂ ತೋಟಗಾರಿಕೆ ಬೆಳೆಗಳಿಗೆ ವಿಮಾ ಮೊತ್ತಕ್ಕೆ ಶೇ.5ರಷ್ಟು ವಿಮಾ ಕಂತನ್ನು ನಿಗದಿಪಡಿಸಲಾಗಿದೆ. ಅತಿ ಕಡಿಮೆ ದರದಲ್ಲಿ ಕಂತುಗಳನ್ನು ಕಟ್ಟಿಸಿಕೊಂಡು ಪ್ರಕೃತಿ ವಿಕೋಪದಿಂದ ಬೆಳೆಗಳು ಹಾಳಾದರೆ ಹೆಚ್ಚಿನ ಮೊತ್ತದ ಹಣ ರೈತರ ಕೈಗೆ ಸಿಗಲಿದೆ.
ಜಿಲ್ಲೆಯ ಪ್ರಮುಖ ಮುಂಗಾರು ಬೆಳೆಗಳಾಗಿರುವ ಹೆಸರು, ಸೋಯಾಬೀನ್, ಭತ್ತ, ಗೋವಿನಜೋಳ, ಶೇಂಗಾ, ಉದ್ದು, ಹತ್ತಿ, ಬಟಾಣಿ, ಜೋಳ, ತೊಗರಿ, ರಾಗಿ, ಸಜ್ಜೆ, ಸೂರ್ಯಕಾಂತಿ, ನವನೆ, ಹುರಳಿ, ಬಟಾನೆ, ಆಲೂಗಡ್ಡೆ, ಈರುಳ್ಳಿ, ಅರಿಷಿನ, ಎಲೆಕೋಸು, ಟೊಮೆಟೊ ಸೇರಿದಂತೆ ಒಟ್ಟು ಬೆಳೆಗಳಿಗೆ ವಿಮಾ ಯೋಜನೆಯಡಿ ವಿಮೆ ಸೌಲಭ್ಯ ಅನುಷ್ಠಾನಗೊಳಿಸಲಾಗುತ್ತಿದೆ.
ಬೆಳೆವಿಮೆಗೆ ಪ್ರತಿವರ್ಷ ಜಿಲ್ಲೆಯಲ್ಲಿ 45 ಸಾವಿರ ರೈತರು ನೋಂದಾಯಿಸಿಕೊಳ್ಳುತ್ತಿದ್ದು, ಈ ಬಾರಿ ಜಿಲ್ಲಾದ್ಯಂತ ಈವರೆಗೆ ಕೇವಲ 15 ಸಾವಿರ ರೈತರಷ್ಟೇ ತಮ್ಮ ಬೆಳೆಗಳ ವಿಮೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಪೈಕಿ ಹೆಸರು ಬೆಳೆಗೆ 9200 ಸಾವಿರ ಹೆಕ್ಟೇರ್ ಪ್ರದೇಶಕ್ಕೆ 3050 ರೈತರು ವಿಮೆ ಮಾಡಿಸಿದ್ದರೆ, 3 ಸಾವಿರ ರೈತರು 3600ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದ ಸೋಯಾಬೀನ್ ಬೆಳೆಗೆ ವಿಮೆ ನೋಂದಾಯಿಸಿಕೊಂಡಿದ್ದಾರೆ. 1619 ರೈತರು ಗೋವಿನಜೋಳದ 1985 ಹೆಕ್ಟೇರ್ ಹಾಗೂ 1960 ರೈತರು 1949 ಹೆಕ್ಟೇರ್ ಪ್ರದೇಶದ ಬೆಳೆಗೆ ವಿಮೆ ಕಂತು ಪಾವತಿಸಿದ್ದಾರೆ. ಬೆಳೆಗಳ ವಿಮೆಗೆ ನೋಂದಾಯಿಸಲು ಜುಲೈ 31ರವರೆಗೆ ರೈತರಿಗೆ ಕಾಲಾವಕಾಶ ನೀಡಲಾಗಿದೆ. ನಿಗದಿತ ಅವಧಿಯೊಳಗೆ ವಿಮೆ ಕಂತು ಪಾವತಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಮಳೆ ಕಡಿಮೆ ಆಗಿ ಬಿತ್ತನೆ ಮಾಡಿದ್ದ ಬೆಳೆ ಹಾನಿಯಾದಾಗ, ಶುಷ್ಕ ಪರಿಸ್ಥಿತಿ, ನೆರೆ, ಪ್ರವಾಹಗಳಿಂದ ಬೆಳೆ ಮುಳಗಡೆಯಾದ ಸಂದರ್ಭ ಸೇರಿದಂತೆ ವಿವಿಧ ಕಾರಣಗಳಿಂದ ಬೆಳೆಗಳಿಗೆ ಹಾನಿ ಉಂಟಾದ ರೈತರಿಗೆ ವಿಮೆ ನೆರವಿಗೆ ಬರುತ್ತದೆ. ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಿಸಲು ಬಿಟ್ಟಾಗ ಚಂಡಮಾರುತ ಅಥವಾ ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ಬೆಳೆ ವಿಮೆ ಮಾಡಿಸಿದರೆ ವಿಮಾ ಸಂಸ್ಥೆಯು ಬೆಳೆ ನಷ್ಟ ಪರಿಹಾರವನ್ನು ರೈತರಿಗೆ ನೇರ ನಗದು ವರ್ಗಾವಣೆ ಮೂಲಕ ನೀಡಲಿದೆ. ಆಸಕ್ತ ರೈತರು ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಗಳು ಹಾಗೂ ಉಚಿತ ಸಹಾಯವಾಣಿ ಸಂಖ್ಯೆ 18002005142 ಸಂಪರ್ಕಿಸಿ ಮಾಹಿತಿ ಪಡೆದು ವಿಮೆ ನೋಂದಾಯಿಸಿಕೊಳ್ಳಬಹುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದ್ದಾರೆ.
ವಿಮೆ ಮಾಡಿಸುವುದು ಹೇಗೆ..?: ಬೆಳೆ ವಿಮೆಗೆ ನೋಂದಾಯಿಸಲು ರೈತರು ಫ್ರೂಟ್ಸ್ ಐಡಿ (ಎಫ್‌ಐಡಿ) ಹೊಂದಿರುವುದು ಕಡ್ಡಾಯವಾಗಿದೆ. ರೈತರು ಬೆಳೆಯುವ ಬೆಳೆಯ ಸರ್ವೆ ನಂಬರ್ ಅವರ ಎಫ್‌ಐಡಿಯಲ್ಲಿ ನಮೂದಾಗಿರಬೇಕು. ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳನ್ನು ಸಂಪರ್ಕಿಸಬಹುದು.
ನೋಂದಾಯಿಸುವುದು ಎಲ್ಲಿ..?: ತಮ್ಮ ಗ್ರಾಮ ವ್ಯಾಪ್ತಿಯ ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಬ್ಯಾಂಕ್‌ಗಳಲ್ಲಿ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಒನ್ ಕೇಂದ್ರಗಳಲ್ಲಿ, ಸಾಮಾನ್ಯ ಸೇವಾ ಕೇಂದ್ರ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಕೇಂದ್ರಗಳಲ್ಲಿ ಕೊನೆಯ ದಿನದೊಳಗೆ ರೈತರು ಅಗತ್ಯ ದಾಖಲೆಗಳೊಂದಿಗೆ ನಿಗದಿತ ಮೊತ್ತದ ಪ್ರೀಮಿಯಮ್ ಪಾವತಿಸಿ ನೋಂದಾಯಿಸಲು ತಿಳಿಸಲಾಗಿದೆ.