ಚಿಕ್ಕಮಗಳೂರು : ಕಳೆದ ಕೆಲ ದಿನಗಳಿಂದ ಕಾಫಿನಾಡಿನ ಜನ ಮಳೆಗಾಗಿ ಕಾತರದಿಂದ ಕಾಯುತ್ತಿದ್ದರು. ಬಿಸಿಲಿನ ಬೇಗೆಗೆ ಬೇಸತ್ತು ಹೋಗಿದ್ದ ಜನರಿಗೆ ಇಂದು ವರುಣ ದೇವ ತಂಪಿನ ವಾತಾವರಣ ನಿರ್ಮಾಣ ಮಾಡಿದ್ದಾನೆ.
ಚಿಕ್ಕಮಗಳೂರು ನಗರದಲ್ಲಿ ಧಾರಾಕಾರ ಮಳೆ ಸುರಿದಿದೆ. ಭಾರಿ ಆಲಿಕಲ್ಲು ಮಳೆಗೆ ನಗರದ ನಿವಾಸಿಗಳು ಥಂಡಾ ಹೊಡೆದಿದ್ದಾರೆ. ಕಾದ ಕಾವಲಿಯಂತಾಗಿದ್ದ ಕಾಫಿನಾಡಿಗೆ ವರುಣ ದೇವ ಕರುಣೆ ತೋರಿದ್ದು, ಭಯಂಕರ ಮಳೆ ಕಂಡು ಕಾಫಿ ನಾಡಿನ ಜನ ಸಂತೋಷ ಹಾಗೂ ಸಂಭ್ರಮದಿಂದ ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ಕೆಲ ದಿನಗಳಿಂದ ಮಳೆ ಇಲ್ಲದೇ ಮಲೆನಾಡು ಭಾಗದಲ್ಲಿ ಕಾಫಿ ತೋಟ, ಅಡಕೆ ತೋಟ ಹಾಗೂ ತೆಂಗಿನ ತೋಟಗಳು ಸಂಪೂರ್ಣವಾಗಿ ಒಣಗಿ ಹೋಗಿದ್ದವು. 41 ಡಿಗ್ರಿ ತಲುಪುತ್ತಿದ್ದ ಬಿಸಿಲ ತಾಪಮಾನಕ್ಕೆ ಜನ ಹೈರಾಣಾಗಿದ್ದರು. ರಸ್ತೆಯಲ್ಲಿ ಅರ್ಧ ಅಡಿ ಎತ್ತರದಲ್ಲಿ ನೀರು ಹರಿಯುತ್ತಿದ್ದು, ರೈತರು, ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದಾರೆ.
ಕೆರೆ ಕಟ್ಟೆಗಳು ಖಾಲಿಯಾಗಿ ರೈತರ ಕಣ್ಣಲ್ಲಿ ನೀರು ತರಿಸುತ್ತಿದ್ದವು. ಬಿಸಿಲಿನ ಬೇಗೆಗೆ ಬೇಸತ್ತಿದ್ದ ಜನರು ಮನೆಯಿಂದ ಹೊರ ಬರುವುದಕ್ಕೂ ಹಿಂದೇಟು ಹಾಕುತ್ತಿದ್ದರು. ಇಂದು ಸುರಿದ ಧಾರಾಕಾರ ಮಳೆಗೆ ನಗರ ಹಾಗೂ ಮಲೆನಾಡು ಭಾಗದಲ್ಲಿ ತಂಪಿನ ವಾತಾವರಣ ನಿರ್ಮಾಣವಾಗಿದೆ. ಮಳೆ ನಿರಂತರವಾಗಿ ಹೀಗೆ ಸುರಿಯಲಿ ಎಂದು ಜನರು ಪ್ರಾರ್ಥನೆಯನ್ನು ಮಾಡಿದ್ದಾರೆ.
ಇದನ್ನೂ ಓದಿ : ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ಮಳೆ: ಹವಾಮಾನ ಇಲಾಖೆ ಮುನ್ಸೂಚನೆ - Rainfall Alert