ಹುಬ್ಬಳ್ಳಿ: ಕಳೆದ ಏಪ್ರಿಲ್ 1ರಿಂದ ಜೂನ್ 27ರವರೆಗೆ ಸುರಿದ ಭಾರೀ ಗಾಳಿಸಹಿತ ಮಳೆಗೆ ವಿವಿಧೆಡೆ ವಿದ್ಯುತ್ ಕಂಬಗಳು, ಪರಿವರ್ತಕಗಳು, ತಂತಿಗಳು ಹಾನಿಗೊಳಗಾಗಿವೆ. ಇದರಿಂದಾಗಿ ಹೆಸ್ಕಾಂಗೆ 33.81 ಕೋಟಿ ರೂ. ನಷ್ಟವಾಗಿದೆ ಎಂದು ಹೆಸ್ಕಾಂ ಎಂಡಿ ಮೊಹಮ್ಮದ್ ರೋಷನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಸ್ಕಾಂ ವ್ಯಾಪ್ತಿಯ ಧಾರವಾಡ, ಬೆಳಗಾವಿ, ವಿಜಯಪುರ, ಉತ್ತರ ಕನ್ನಡ, ಗದಗ, ಹಾವೇರಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ 10,448 ವಿದ್ಯುತ್ ಕಂಬಗಳು ಹಾನಿಯಾಗಿವೆ. ಈ ಪೈಕಿ 10,076 ಕಂಬಗಳನ್ನು ದುರಸ್ತಿಗೊಳಿಸುತ್ತಿದ್ದು 372 ಕಂಬಗಳ ದುರಸ್ತಿ ಕಾರ್ಯ ನಡೆದಿದೆ. 1,216 ವಿದ್ಯುತ್ ಪರಿವರ್ತಕಗಳು (ಟಿಸಿ) ಹಾನಿಗೊಳಗಾಗಿದ್ದು, 1,214 ಪರಿವರ್ತಕಗಳನ್ನು ದುರಸ್ತಿ ಮಾಡಲಾಗಿದೆ. ಹಾನಿಗೊಳಗಾದ 94.47 ಕಿ.ಮೀ. ಉದ್ದದ ತಂತಿಗಳ ಪೈಕಿ 92.24 ಕಿ.ಮೀ ಉದ್ದದ ತಂತಿಯನ್ನು ಈಗಾಗಲೇ ದುರಸ್ತಿ ಮಾಡಲಾಗಿದೆ. ಬಾಕಿ ಉಳಿದವುಗಳ ದುರಸ್ತಿ ಕಾರ್ಯಗಳು ಭರದಿಂದ ಸಾಗಿವೆ.
ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ 10448 ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ 17.02 ಕೋಟಿ ರೂ. ಮತ್ತು 1216 ವಿದ್ಯುತ್ ಪರಿವರ್ತಕ (ಟಿಸಿ)ಗಳು ಹಾನಿಗೊಳಗಾಗಿದ್ದರಿಂದ 15.79 ಕೋಟಿ ರೂ. ಹಾಗೂ 94.47 ಕಿ.ಮೀ ಉದ್ದದ ವಿದ್ಯುತ್ತಂತಿಗಳಿಗೆ ಹಾನಿಯಾಗಿದ್ದರಿಂದ 99.47 ಲಕ್ಷ ರೂ. ಸೇರಿದಂತೆ ಒಟ್ಟಾರೆ 33.89 ಕೋಟಿ ರೂ. ನಷ್ಟವಾಗಿದೆ.
ಬೆಳಗಾವಿಯಲ್ಲಿ ಹೆಚ್ಚು ಹಾನಿ: ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ 2,593 ವಿದ್ಯುತ್ ಕಂಬಗಳು ನೆಲಕಚ್ಚಿದ್ದು, ಎಲ್ಲ ಕಂಬಗಳನ್ನು ದುರಸ್ತಿಮಾಡಲಾಗಿದೆ. 477 ವಿದ್ಯುತ್ ಪರಿವರ್ತಕಗಳು ಹಾನಿಯಾಗಿದ್ದು ಅವುಗಳ ಪೈಕಿ 475 ಪರಿವರ್ತಕಗಳನ್ನು ದುರಸ್ತಿಯಾಗಿದೆ. 2.54 ಕಿ.ಮೀ ಉದ್ದದ ವಿದ್ಯುತ್ ತಂತಿಗಳು ತುಂಡಾಗಿದ್ದು, 1.83 ಕಿ.ಮೀ ಉದ್ದದ ವಿದ್ಯುತ್ ತಂತಿಗಳನ್ನು ಸರಿಪಡಿಸಲಾಗಿದೆ. ಇದರಿಂದಾಗಿ ಹೆಸ್ಕಾಂಗೆ ರೂ.8.78 ಕೋಟಿರೂ ನಷ್ಟವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.