ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಇಂದು ವರುಣ ಅಬ್ಬರಿಸಿದ್ದಾನೆ. ದೀಪಾವಳಿ ಹಬ್ಬದ ತಯಾರಿಯಲ್ಲಿರುವ ಜನರಿಗೆ ವಾರಾಂತ್ಯದ ಮಳೆ ಬೇಸರ ತಂದಿದೆ. ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಸಲು ಜನರು ಮಾರುಕಟ್ಟೆಗೆ ಬರುತ್ತಿದ್ದರು. ಆದರೆ ಮಳೆರಾಯನಿಂದಾಗಿ ಖರೀದಿ ಮಾಡಲಾಗಿಲ್ಲ.
ಕಳೆದ ಕೆಲ ದಿನಗಳಿಂದ ಉದ್ಯಾನ ನಗರಿಯಲ್ಲಿ ಮಳೆ ಜೋರಾಗಿದ್ದು, ಇಂದು ಕೂಡ ಮುಂದುವರಿದಿದೆ. ನಗರದಲ್ಲಿ ಸದ್ಯ ಗುಡುಗು, ಮಿಂಚು, ಗಾಳಿ ಸಹಿತ ಮಳೆಯಾಗುತ್ತಿದೆ. ನಗರದ ಮೆಜೆಸ್ಟಿಕ್, ಜಯನಗರ, ವಿಜಯನಗರ, ಶಾಂತಿನಗರ, ಸುಂಕದಕಟ್ಟೆ, ರಾಜಾಜಿನಗರ, ಕೆಆರ್ ಮಾರುಕಟ್ಟೆ, ಗಾಂಧಿ ಬಜಾರ್, ರಾಜರಾಜೇಶ್ವರಿ ನಗರ, ಉತ್ತರಹಳ್ಳಿ, ಶ್ರೀನಿವಾಸ ನಗರ, ಜಾಲಹಳ್ಳಿ, ಕೋರಮಂಗಲ ಮತ್ತಿತರ ಕಡೆ ಮಳೆ ಧಾರಾಕಾರವಾಗಿ ಮಳೆ ಸುರಿದಿದೆ.
ಮಳೆ ಅರ್ಭಟಕ್ಕೆ ಅಲ್ಲಲ್ಲಿ ರಸ್ತೆಗಳಲ್ಲಿ ಮಳೆ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ತೊಂದರೆಯುಂಟಾಗಿತ್ತು. ಸಂಜೆ ವೇಳೆಗೂ ಮಳೆಯಾಗಿದ್ದು, ಹಲವು ಕಡೆಗಳಲ್ಲಿ ರಸ್ತೆ ಮೇಲೆ ನೀರು ನಿಂತಿದೆ. ಆನೇಕಲ್, ಜಿಗಣಿ, ಬನ್ನೇರುಘಟ್ಟ ಚಂದಾಪುರ ಹಲವೆಡೆ ರಸ್ತೆಯಲ್ಲಿಯೇ ಮಳೆ ನೀರು ನಿಂತಿದ್ದರಿಮದ ಪಾದಚಾರಿಗಳು ಪರದಾಡುವಂತಾಗಿತ್ತು.
ಶಿವನಹಳ್ಳಿ ಸಿಗ್ನಲ್ ಬಳಿ ಟ್ರಾಫಿಕ್ ಜಾಮ್: ರಾಜಾಜಿನಗರದ ಶಿವನಹಳ್ಳಿ ಸಿಗ್ನಲ್ ಬಳಿ ರಸ್ತೆಗೆ ಅಡ್ಡಲಾಗಿ ಮರದ ರೆಂಬೆ ಕೊಂಬೆಗಳು ಬಿದ್ದು, ಟ್ರಾಫಿಕ್ ಜಾಮ್ ಉಂಟಾಯಿತು. ಸದ್ಯ ಪಾಲಿಕೆ ಸಿಬ್ಬಂದಿ ತೆರವು ಕಾರ್ಯ ಕೈಗೊಂಡಿದ್ದಾರೆ.
ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು, ಹಬ್ಬದ ತಯಾರಿಯಲ್ಲಿರುವ ಜನರಿಗೆ ಹಾಗೂ ವ್ಯಾಪಾರಸ್ಥರಿಗೆ ಸಮಸ್ಯೆ ಎದುರಾಗಿದೆ. ಪೂಜಾ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳು ಹಾಗೂ ಹೂವು ಹಣ್ಣು ವ್ಯಾಪಾರ ಮಾಡುವ ವ್ಯಾಪಾರಿಗಳು ಹಬ್ಬದ ಹಿನ್ನೆಲೆಯಲ್ಲಿ ಭರ್ಜರಿ ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ ಮನೆಯಿಂದಾಗಿ ವ್ಯಾಪಾರ ಮಂಕಾಗುವ ಸಾಧ್ಯತೆಯಿರುವುದರಿಂದ ಚಿಂತೆಗೀಡಾಗಿದ್ದಾರೆ.
ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಜೊತೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಡಿಗ್ರಿ ಮತ್ತು 20 ಡಿಗ್ರಿ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು.
ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಈ 10 ಜಿಲ್ಲೆಗಳಿಗೆ ಮುಂದಿನ 24 ಗಂಟೆ ಭಾರೀ ಮಳೆ ಸಾಧ್ಯತೆ