ಹಾವೇರಿ: ಜಿಲ್ಲೆಯ ವಿವಿಧೆಡೆ ಗಾಳಿ ಸಮೇತ ಭಾರಿ ಮಳೆಯಾಗಿದೆ. ಹಿರೇಕೆರೂರು ಪಟ್ಟಣ ಮತ್ತು ರಟ್ಟಿಹಳ್ಳಿಯ ಸುತ್ತಮುತ್ತಲಿನ ಭಾಗದಲ್ಲಿ ಗುಡುಗು ಸಿಡಿಲಿನೊಂದಿಗೆ ಧಾರಾಕಾರ ವರ್ಷಧಾರೆ ಸುರಿದಿದ್ದು, ಗಾಳಿಯ ಆರ್ಭಟಕ್ಕೆ ಕೆಲ ಮನೆಗಳ ಮೇಲ್ಛಾವಣಿ, ತಗಡಿನ ಶೀಟ್ಗಳು ಹಾರಿ ಹೋಗಿವೆ. ಕೆಲವೆಡೆ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಮೇಲ್ಛಾವಣಿಯ ತಗಡಿನ ಶೀಟ್ ಹಾರಿ ಹೋಗುವ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನರು ಸುಮಾರು ಎರಡು ಗಂಟೆಗಳ ಕಾಲ ಸುರಿದ ವರುಣನ ಅಬ್ಬರದಿಂದ ಸಂತಸಗೊಂಡಿದ್ದಾರೆ.
ಸಿಡಿಲಿಗೆ 18 ಕುರಿಗಳು ಬಲಿ: ಪಕ್ಕದ ಶಿವಮೊಗ್ಗ ಜಿಲ್ಲೆಯಲ್ಲೂ ಹಲವು ಕಡೆ ಭಾರಿ ಗಾಳಿ ಸಹಿತ ಮಳೆ ಸುರಿದಿದೆ. ಈ ವೇಳೆ ಸಿಡಿಲು ಬಡಿದು 18 ಕುರಿಗಳು ಸಾವನ್ನಪ್ಪಿದ ಘಟನೆ ಆಯನೂರಿನ ಕೋಟೆ ಗ್ರಾಮದಲ್ಲಿ ನಡೆದಿದೆ. ಜಾಕಿರ್ ಹುಸೇನ್ ಎಂಬುವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ. ಜಾಕಿರ್ ಹುಸೇನ್ ಕುರಿ ಸಾಕಾಣಿಕೆ ಮಾಡುತ್ತ ಜೀವನ ನಡೆಸುತ್ತಿದ್ದರು. ಶುಕ್ರವಾರ ಸಂಜೆ ಜಾಕಿರ್ ಅವರ ಮಕ್ಕಳು ಕುರಿಗಳನ್ನು ಮೇಯಿಸಲು ಹೋಗಿದ್ದಾಗ ಘಟನೆ ನಡೆದಿದೆ. ಅದೃಷ್ಟವಶಾತ್ ಮಕ್ಕಳಿಬ್ಬರಿಗೆ ಯಾವುದೇ ಗಾಯಗಳಾಗಿಲ್ಲ. ಈ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಶು ಇಲಾಖೆಯ ಅಧಿಕಾರಿಗಳಿಗೆ ಹಾಗೂ ಕುರಿ ಮತ್ತು ಉಣ್ಣೆ ವಿಭಾಗದ ಅಧಿಕಾರಿಗಳಿಗೂ ಜಾಕಿರ್ ಹುಸೇನ್ ಮಾಹಿತಿ ನೀಡಿದ್ದಾರೆ. ಕುರಿಗಳ ಸಾವಿನಿಂದ ಸುಮಾರು 3 ಲಕ್ಷ ರೂ.ಗಳಷ್ಟು ನಷ್ಟವಾಗಿದ್ದು, ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಗದಗದಲ್ಲಿಯೂ ಕುರಿಗಳು ಸಾವು: ಗದಗ ಜಿಲ್ಲೆಯಲ್ಲಿಯೂ ಕೆಲವೆಡೆ ಮಳೆಯಾಗಿದ್ದು, ಸಿಡಿಲು ಬಡಿದು 20 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಗದಗ ತಾಲೂಕಿನ ಕಿರಟಗೇರಿ ಗ್ರಾಮದ ಹೊರ ವಲಯದಲ್ಲಿ ಶುಕ್ರವಾರ ನಡೆದಿದೆ. ಮಳೆ ಹಿನ್ನೆಲೆಯಲ್ಲಿ ಕುರಿಗಾಹಿಗಳು ಮರದ ಕೆಳಗ 200 ಕ್ಕೂ ಹೆಚ್ಚು ಕುರಿಗಳನ್ನು ನಿಲ್ಲಿಸಿಕೊಂಡಿದ್ದರು. ಈ ವೇಳೆ ಮರದ ಬಳಿಯೇ ಸಿಡಿಲು ಬಡಿದಿದೆ. ಮುತ್ತಪ್ಪ ದೊಡ್ಡಮನಿ ಹಾಗೂ ಶಿವಪ್ಪ ಹರಿಜನ ಅವರಿಗೆ ಸೇರಿದ ಕುರಿಗಳು ಮೃತಪಟ್ಟಿವೆ. ವಿಷಯ ತಿಳಿದು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಪಡೆದಿದ್ದಾರೆ.
ಇದನ್ನೂ ಓದಿ: ವಿಜಯಪುರ ಜನತೆಗೆ ತಂಪೆರೆದ ಮಳೆರಾಯ: ಸಿಡಿಲಿಗೆ ಬಾಲಕ, ರೈತ ಬಲಿ