ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಕುಕ್ಕೆ ಸುಬ್ರಹ್ಮಣ್ಯ ಸುತ್ತಮುತ್ತ ಕೆಲ ಗಂಟೆ ಕಾಲ ದಿಢೀರ್ ಗುಡುಗು ಸಹಿತ ಭಾರಿ ಮಳೆ ಸುರಿಯಿತು. ಇದರಿಂದ, ಇಲ್ಲಿನ ದರ್ಪಣ ತೀರ್ಥ ನದಿಯು ಪ್ರವಾಹ ಸದೃಶವಾಗಿ ತುಂಬಿ ಹರಿಯಿತು.
ರಭಸವಾಗಿ ಹರಿದ ನದಿಯ ನೀರು ಆದಿಸುಬ್ರಹ್ಮಣ್ಯ ದೇವಸ್ಥಾನದ ಹೊರಾಂಗಣಕ್ಕೆ ಪ್ರವೇಶಿಸಿತು. ಅಲ್ಲದೇ, ಅಲ್ಪ ಪ್ರಮಾಣದಲ್ಲಿ ಒಳ ಪ್ರವೇಶಿಸಿದ್ದು, ಕೆಲ ಹೊತ್ತಲ್ಲೇ ಸಂಪೂರ್ಣ ಪ್ರವಾಹ ಶಾಂತವಾಯಿತು.
ಮಧ್ಯಾಹ್ನ ಸುಮಾರು 3 ಗಂಟೆ ಸುಮಾರಿಗೆ ಕಡಬ ತಾಲೂಕಿನಾದ್ಯಂತ ಭಾರೀ ಗುಡುಗು ಸಹಿತ ಮಳೆ ಅಬ್ಬರಿಸಿದೆ. ಸುಮಾರು ಒಂದು ತಾಸು ಅಧಿಕ ಸಮಯದವರೆಗೆ ಧಾರಾಕಾರ ವರ್ಷಧಾರೆ ಸುರಿಸಿದೆ. ವರುಣನ ಆರ್ಭಟದಿಂದ ಆದಿಸುಬ್ರಹ್ಮಣ್ಯದ ಕೆಲವು ಅಂಗಡಿಮುಂಗಟ್ಟುಗಳಿಗೂ ನೀರು ನುಗ್ಗಿತ್ತು.
ಹಳ್ಳದ ಮಧ್ಯೆ ಸಿಲುಕಿದ್ದವರ ರಕ್ಷಣೆ: ಇನ್ನೊಂದೆಡೆ, ಏಕಾಏಕಿ ಮಳೆಯಿಂದ 25 ಜನರು ಹಳ್ಳದ ಮಧ್ಯೆ ಸಿಲುಕಿದ್ದ ಘಟನೆ ಹಾವೇರಿಯಲ್ಲಿ ನಡೆಯಿತು. ಬಳಿಕ ಭಕ್ತರನ್ನು ರಕ್ಷಣೆ ಮಾಡಲಾಗಿದೆ. ಸವಣೂರು ತಾಲೂಕಿನ ಬರದೂರು ಗ್ರಾಮದ ಹೊರವಲಯದಲ್ಲಿರುವ ರಾಮಲಿಂಗ ಮಠದಲ್ಲಿ ಭಕ್ತರು ಅಪಾಯಕ್ಕೆ ಸಿಲುಕಿದ್ದರು.
ಹಾವೇರಿ ತಾಲೂಕಿನ ತೋಟದಯಲ್ಲಾಪುರ ಹಾಗೂ ಹಾನಗಲ್ ತಾಲೂಕಿನ ಅಲ್ಲಾಪುರ ಗ್ರಾಮದ ನಿವಾಸಿಗಳು ಪಂಡರಾಪುರಕ್ಕೆ ತೆರಳುತ್ತಿದ್ದರು. ಭಾನುವಾರ ರಾತ್ರಿ ಬರದೂರು ಗ್ರಾಮದ ಹೊರವಲಯದಲ್ಲಿರುವ ರಾಮಲಿಂಗ ಮಠದಲ್ಲಿ ವಾಸ್ತವ್ಯ ಹೂಡಿದ್ದರು. ರಾತ್ರಿ ಸುರಿದ ಧಾರಾಕಾರ ಮಳೆಗೆ ಬಾಜಿರಾಯನ ಹಳ್ಳ ತನ್ನ ಮಿತಿಗಿಂತ ಅಧಿಕ ಮಟ್ಟದಲ್ಲಿ ಹರಿಯುತ್ತಿದೆ. ಮಠದ ಸುತ್ತಾ ನೀರು ಹರಿದು, ಮಠದಲ್ಲಿರುವ ಭಕ್ತರು ಹೊರಬರಲಾಗದೇ ಸಿಲುಕಿಕೊಂಡಿದ್ದರು.
ಇದನ್ನೂ ಓದಿ: ಕೋರಮಂಗಲದಲ್ಲಿ ಕ್ರೀಡಾಂಗಣದ ಆವರಣ ಜಲಾವೃತ: ಏಷ್ಯನ್ ನೆಟ್‌ಬಾಲ್ ಪಂದ್ಯ ಮುಂದೂಡಿಕೆ
ಇದರಿಂದ ತೀವ್ರ ಆತಂಕ ಸೃಷ್ಟಿಯಾಗಿತ್ತು. ಗ್ರಾಮಸ್ಥರು ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಕಾರ್ಯಾಚರಣೆಗೆ ಇಳಿದ ರಕ್ಷಣಾ ಸಿಬ್ಬಂದಿ ಬೋಟ್ ಮೂಲಕ ಭಕ್ತರನ್ನು ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ: ಮತ್ತೆ ವಾಯುಭಾರ ಕುಸಿತ: ಬೆಂಗಳೂರು ಸೇರಿ ರಾಜ್ಯದ 25 ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ