ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಡಿಸೆಂಬರ್ 12ಕ್ಕೆ ನಿಗದಿಪಡಿಸಿದೆ. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ಮುಂದೂಡಿತು.
ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ಹಾಜರಾಗಿದ್ದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರೊ.ರವಿವರ್ಮ ಕುಮಾರ್, "ಪ್ರಕರಣ ಸಂಬಂಧ ಅರ್ಜಿದಾರರ ವಿರುದ್ಧ ವಾರೆಂಟ್ ಹೊರಡಿಸಲಾಗಿತ್ತು. ಆದರೆ, ವಿಚಾರಣೆಗೆ ಖುದ್ದು ಹಾಜರಿಗೆ ವಿನಾಯಿತಿ ನೀಡಿ ಈ ಹಿಂದೆ ನೀಡಿರುವ ಮಧ್ಯಂತರ ಆದೇಶವನ್ನು ರದ್ದುಪಡಿಸಬೇಕು" ಎಂದು ಕೋರಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಯಡಿಯೂರಪ್ಪ ಪರ ವಕೀಲರು, "ಪೋಕ್ಸೊ ವಿಶೇಷ ನ್ಯಾಯಾಲಯದ ನೋಟಿಸ್ಗೆ ಅರ್ಜಿದಾರರ ಪರ ವಕೀಲರ ಮೂಲಕ ಪ್ರತಿಕ್ರಿಯಿಸಿದ್ದಾರೆ. ಹೈಕೋರ್ಟ್ನಿಂದ ಮಧ್ಯಂತರ ರಕ್ಷಣೆ ಪಡೆದು ವಿಚಾರಣೆಗೂ ಹಾಜರಾಗಿದ್ದಾರೆ. ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವುದು ಆರೋಪಿಯ ಹಕ್ಕು. ನಂತರ ವಿಚಾರಣೆಗೆ ಕರೆದಾಗ ಹಾಜರಾಗಿದ್ದಾರೆ.
ಅಲ್ಲದೆ, ಘಟನೆ ಫೆಬ್ರವರಿ 2ರಂದು ಬೆಳಗ್ಗೆ 11ರಿಂದ 11.30ರ ಸಮಯದಲ್ಲಿ ಅರ್ಜಿದಾರರ ಮನೆಯಲ್ಲಿ ನಡೆದಿದೆ ಎನ್ನುವ ಆರೋಪವಿದೆ. ಸ್ಥಳದಲ್ಲಿ 20ರಿಂದ 25 ಜನರ ಸಮ್ಮುಖದಲ್ಲಿ ಇದು ನಡೆಯಲು ಸಾಧ್ಯವೇ" ಎಂದು ಪ್ರಶ್ನಿಸಿದರು.
ಅಲ್ಲದೇ, "ಘಟನೆ ನಡೆದ ಒಂದೂವರೆ ತಿಂಗಳ ಬಳಿಕ ದೂರು ದಾಖಲಿಸಲಾಗಿದೆ. ಈ ನಡುವೆ ದೂರುದಾರರು ಹಲವು ಬಾರಿ ಅರ್ಜಿದಾರರ ಮನೆಗೆ ಬಂದಿದ್ದಾರೆ. ದೂರುದಾರ ಮಹಿಳೆ ನಟೋರಿಯಸ್ ಆಗಿದ್ದು, 56 ಪ್ರಕರಣ ದಾಖಲಿಸಿದ್ದಾರೆ. ಭೂಮಿಯ ಮೇಲಿರುವ ಎಲ್ಲರ ಮೇಲೂ ಅವರು ದೂರು ದಾಖಲಿಸಿದ್ದಾರೆ" ಎಂದು ವಿವರಿಸಿದರು.
ಮುಂದುವರೆದು, "ಮಹಿಳೆ ತನ್ನ ಪತಿ, ಮಗ, ಎಡಿಜಿಪಿ ಎಲ್ಲರ ಮೇಲೂ ದೂರು ಸಲ್ಲಿಸಿದ್ದರು. ಅವರ ಪಕ್ಷದ ನಾಯಕ ಉಗ್ರಪ್ಪ ಮೇಲೂ ದೂರು ದಾಖಲಿಸಿದ್ದರು. ದೂರುದಾರರ ಮಹಿಳೆಯ ದೂರನ್ನು ಸತ್ಯವೆಂದು ಭಾವಿಸಬಾರದು. ಒಂದೂವರೆ ತಿಂಗಳ ನಂತರ ರಾಜಕಾರಣಿಯೊಬ್ಬರ ಮನೆಯಿಂದ ಬಂದು ದೂರು ದಾಖಲಿಸುತ್ತಾರೆ. ಈಗ ತನಿಖೆ ಮುಗಿದು ಆರೋಪಪಟ್ಟಿಯೂ ದಾಖಲಾಗಿದೆ" ಎಂದು ವಾದಿಸಿದರು.
ಈ ವೇಳೆ ಸರ್ಕಾರದ ಪರ ವಕೀಲರು, ಮೃತ ಮಹಿಳೆಯ ಮೇಲೆ ದೂರುದಾರರ ಪರ ವಕೀಲರ ಅಪಮಾನಕಾರಿ ಹೇಳಿಕೆ ಸರಿಯಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದರು. ವಾದ ಆಲಿಸಿದ ಪೀಠ ವಿಚಾರಣೆ ಮುಂದೂಡಿತು.
ಇದನ್ನೂ ಓದಿ: ಮುಡಾ: ಸಿಎಂ ವಿರುದ್ಧದ ಪ್ರಕರಣ ಸಿಬಿಐಗೆ ವಹಿಸುವಂತೆ ಕೋರಿದ್ದ ಅರ್ಜಿ ವಿಚಾರಣೆ ಡಿ.19ಕ್ಕೆ ನಿಗದಿ