ಬೆಂಗಳೂರು: ''ರಾಜ್ಯದಲ್ಲಿ ಈ ವರ್ಷ ಇದುವರೆಗೆ 327 ಬಾಣಂತಿಯರ ಸಾವಾಗಿದೆ. ಇದನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ತಪ್ಪಿತಸ್ಥರಿಗೆ ಕ್ರಮ ಆಗಲೇಬೇಕು. ನನ್ನ ತಪ್ಪಿದ್ದರೆ ರಾಜೀನಾಮೆ ಕೊಡಲೂ ಸಿದ್ಧ'' ಎಂದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ''ಎಲ್ಲವನ್ನೂ ಪರಿಶೀಲಿಸಿ ಎಂದು ಸೂಚನೆ ನೀಡಿದ್ದೇವೆ. ಇಂತಹ ಪ್ರಕರಣಗಳಲ್ಲಿ ಸಹನೆ ಇರಬಾರದು, ಈ ರೀತಿಯ ಘಟನೆಗಳು ಮರುಕಳಿಸಬಾರದು'' ಎಂದರು.
ಘಟನೆ ಬಗ್ಗೆ ಸಚಿವರ ಸ್ಪಷ್ಟನೆ ಹೀಗಿದೆ: ''ಬಳ್ಳಾರಿಯಲ್ಲಿ 9 ಮಹಿಳೆಯರಿಗೆ ಸಮಸ್ಯೆ ಆಗಿತ್ತು. ನಾಲ್ವರು ಈಗಾಗಲೇ ತೀರಿಕೊಂಡಿದ್ದರು. ಐದನೇಯವರು ಚಿಕಿತ್ಸೆ ಪಡೆಯುತ್ತಿದ್ದರು. ಅವರೂ ಮೃತರಾಗಿದ್ದಾರೆ. ಅದೇ ಬ್ಯಾಚ್ನ ರಿಂಗರ್ ಲ್ಯಾಕ್ಟೇಟ್ ದ್ರಾವಣ ಕೊಡಲಾಗಿತ್ತು. ಈಗಾಗಲೇ ಕಂಪನಿ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ. ಮೃತರಿಗೆ ಬೇರೆ ಆರೋಗ್ಯ ಸಮಸ್ಯೆಯೂ ಇತ್ತು ಎನ್ನಲಾಗಿದೆ. ಆದರೆ, ಚೇತರಿಸಿಕೊಳ್ಳುತ್ತಿದ್ದರು ಎಂದು ವೈದ್ಯರು ಹೇಳಿದ್ದರು. ಗುರುವಾರ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ವೈದ್ಯರು ತಿಳಿಸಿದ್ದರು'' ಎಂದು ಸಚಿವರು ಮಾಹಿತಿ ನೀಡಿದರು.
ಚೇತರಿಸಿಕೊಳ್ಳುತ್ತಿದ್ದ ಬಾಣಂತಿ ಸಾವನ್ನಪ್ಪಿದ್ದು ದುರಂತ: ''ಕಂಪನಿಯಿಂದ ದ್ರಾವಣ ಸರಬರಾಜು ಆಗಿತ್ತು. ಕಂಪನಿಯ ಬೇರೆ ಪ್ರಾಡಕ್ಟ್ ರದ್ಧು ಮಾಡಿದ್ದೇವೆ. ಪಶ್ಚಿಮ ಬಂಗಾಳ ಕಂಪನಿಯದು, ಅದರ ಟೆಸ್ಟ್ ವರದಿ ಬಂದಿದೆ. ಅವರು ಸೆಂಟ್ರಲ್ ಲ್ಯಾಬ್ಗೆ ಹೋಗಿದ್ದರು. ಅಲ್ಲಿ ಏನೂ ಸಮಸ್ಯೆ ಇಲ್ಲ ಅಂತ ಬಂದಿತ್ತು. ರೋಗಿ ವೆಂಟಿಲೇಟರ್ನಿಂದ ಹೊರ ಬಂದಿದ್ದರು. ವಾಕ್ ಕೂಡ ಮಾಡುತ್ತಿದ್ದರು. ಆಂಟಿಬಯೋಟಿಕ್ ಕೂಡ ನಿಲ್ಲಿಸಿದ್ದರು. ಚೇತರಿಸಿಕೊಳ್ಳುತ್ತಿದ್ದ ಅವರು ಸಾವನ್ನಪ್ಪಿರುವುದು ದುರಂತ'' ಎಂದು ಬೇಸರ ವ್ಯಕ್ತಪಡಿಸಿದರು.
''ನಾವು ಎಲ್ಲಿ ಎಡವಿದ್ದೆವು ಅದರ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಉಮಾ ಮಹದೇವನ್ ನೇತೃತ್ವದಲ್ಲಿ ಕಮಿಟಿ ಮಾಡಿದ್ದೆವು. ಡ್ರಗ್ ಕಂಟ್ರೋಲರ್ ಅವರನ್ನು ಸಸ್ಪೆಂಡ್ ಮಾಡಿದ್ದೆವು. ಫಾರ್ಮಾ ಕಂಪನಿ ರಕ್ಷಿಸುವ ಕಾನೂನುಗಳಿವೆ. ಅವರಿಗೆ ಶಿಕ್ಷೆ ಕೊಡುವ ನಿಯಮ ಇಲ್ಲ. ತಪ್ಪಿತಸ್ಥರ ಮೇಲೆ ಕ್ರಮ ಆಗುತ್ತಿಲ್ಲ. ನಾವು ಕಠಿಣ ಪ್ರೊಸೀಸರ್ ಹಾಕಬೇಕಾಗುತ್ತದೆ'' ಎಂದು ಅಭಿಪ್ರಾಯಪಟ್ಟರು.
ಘಟನೆ ಮರುಕಳಿಸದಂತೆ ಕ್ರಮ: ''ಔಷಧ ತಯಾರಿಸಿದ ಕಂಪನಿ ಮೇಲೆ ಕ್ರಮ ಕೈಗೊಳ್ಳುತ್ತಿದ್ದೇವೆ. ಮೃತ ಬಾಣಂತಿಯರ ಕುಟುಂಬಸ್ಥರಿಗೆ ಪರಿಹಾರ ಘೋಷಿಸಿದ್ದೇವೆ. ಇನ್ಮುಂದೆ ಇಂತಹ ಘಟನೆಗಳು ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ನಾವು ಟೆಸ್ಟ್ ಮಾಡಿರುವ ದ್ರಾವಣವನ್ನು ಕೇಂದ್ರ ಲ್ಯಾಬ್ ಸರಿ ಇದೆ ಅಂತಿದೆ. ಕೋರ್ಟ್ಗೆ ಹೋದರೆ ಕೇಂದ್ರದ ಲ್ಯಾಬ್ ಹೇಳಿದ್ದನ್ನು ಅದು ಒಪ್ಪುತ್ತದೆ. ಹಾಗಾಗಿ, ಇದರಲ್ಲಿ ತಾಂತ್ರಿಕ ಗೊಂದಲಗಳಿವೆ. ನಾವು ಯಾವುದನ್ನೂ ಮುಚ್ಚಿಹಾಕಲ್ಲ. ಟೆಂಡರ್ ಪ್ರಕ್ರಿಯೆ ಪರಿಶೀಲನೆ ಮಾಡಬೇಕು. ಒಳ್ಳೆಯ ಕಂಪನಿಗಳು ಟೆಂಡರ್ನಲ್ಲಿ ಭಾಗವಹಿಸಬೇಕು'' ಎಂದರು.
ತಪ್ಪಿದ್ದರೆ ರಾಜೀನಾಮೆ ಕೊಡಲೂ ಸಿದ್ಧ: ''ಬಾಣಂತಿಯರ ಸಾವು ಪ್ರಕರಣದಲ್ಲಿ ಪ್ರತಿಪಕ್ಷಗಳ ಸಹಕಾರವೂ ನಮಗೆ ಅಗತ್ಯ. ಇದು ಜೀವಕ್ಕೆ ಸಂಬಂಧಿಸಿದ ವಿಚಾರ. ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕ್ರಮ ಆಗಲೇಬೇಕು. ನನ್ನ ರಾಜೀನಾಮೆಯಿಂದ ಸರಿಯಾಗುತ್ತದೆ ಎಂಬುದಾದರೆ, ಅದಕ್ಕೂ ಸಿದ್ಧ. ಇದರಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ. ನನ್ನ ತಪ್ಪಿದ್ದರೆ ರಾಜೀನಾಮೆ ಕೊಡಲೂ ಸಿದ್ಧ'' ಎಂದು ಗುಂಡೂರಾವ್ ತಿರುಗೇಟು ನೀಡಿದರು.
ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು: ಸಾವಿನ ಸಂಖ್ಯೆ 5ಕ್ಕೇರಿಕೆ