ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿನ ಸೈಟ್ ಹಂಚಿಕೆ ಹಗರಣದ ಕುರಿತು ಮಾಹಿತಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡಿರುವ ಬೆನ್ನಲ್ಲೆ ನಿವೇಶನ ಹಂಚಿಕೆ ಬಗ್ಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಕಾಗದ ಪತ್ರ ಸಮಿತಿ ಅಧ್ಯಕ್ಷ ಹೆಚ್.ಡಿ. ರೇವಣ್ಣ ವಿವರಣೆ ಕೇಳಿದ್ದಾರೆ.
ಮುಡಾದಿಂದ ಇದುವರೆಗೆ ನಿವೇಶನ ಹಂಚಿಕೆಯಾಗಿರುವ ರಾಜ್ಯಸಭಾ ಸದಸ್ಯರು, ಲೋಕಸಭೆ ಸದಸ್ಯರು, ಶಾಸಕರು, ವಿಧಾನಪರಿಷತ್ ಸದಸ್ಯರ ವಿವರನ್ನು ರೇವಣ್ಣ ಕೇಳಿದ್ದು, ಸಂಪೂರ್ಣ ವಿವರ ನೀಡಲು ಕನಿಷ್ಠ 3 ತಿಂಗಳ ಕಾಲಾವಕಾಶ ಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.
ರಾಜ್ಯಪಾಲರು ಮುಡಾ ಹಗರಣದ ವರದಿ ಕೇಳಿದ ತಕ್ಷಣ ಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರು ಶಾಕ್ ಆಗಿದ್ದರು. ಸಿಎಂ ಕಾವೇರಿ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಸಭೆ ಮಾಡಲಾಗಿತ್ತು. ಸಭೆಯಲ್ಲಿ ಕಾನೂನು ಹೋರಾಟ ಮಾಡಲು ನಿರ್ಧರಿಸಲಾಗಿತ್ತು. ಸಚಿವರೆಲ್ಲರೂ ಸಿಎಂ ಬೆಂಬಲಕ್ಕೆ ನಿಲ್ಲುವ ಅಭಯ ನೀಡಿದ್ದರು. ನಂತರ ತಮ್ಮ ವಿರುದ್ಧದ ಪ್ರಕರಣವಾಗಿರುವ ಕಾರಣಕ್ಕೆ ಸಂಪುಟ ಸಭೆಯಿಂದ ಸಿಎಂ ಸಿದ್ದರಾಮಯ್ಯ ಅವರು ಅಂತರ ಕಾಯ್ದುಕೊಂಡಿದ್ದರು. ಬಳಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಡಾ ದಾಖಲೆಗಳನ್ನು ತರಿಸಿಕೊಂಡು ಯಾರಿಗೆ ನಿವೇಶನ ಹಂಚಿಕೆಯಾಗಿದೆ ಎಂಬ ಬಗ್ಗೆ ಚರ್ಚೆ ಮಾಡಲಾಗಿತ್ತು. ಸಚಿವ ಸಂಪುಟ ಸಭೆಯಲ್ಲೂ ಸಚಿವರು ಸಿಎಂಗೆ ಸಂಪೂರ್ಣ ಸಹಕಾರ ನೀಡಿದ್ದರು. ರಾಜ್ಯಪಾಲರ ನೊಟೀಸ್‌ನಲ್ಲಿ ಬಳಸಿದ ಪದ ಮತ್ತು ಒಕ್ಕಣಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಜ್ಯಪಾಲರು ನೀಡಿರುವ ನೊಟೀಸ್ ಹಿಂಪಡೆಯುವಂತೆ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.
ಇನ್ನು ಮುಡಾ ಹಗರಣ ಖಂಡಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುತ್ತು ಜೆಡಿಎಸ್ ಇಂದಿನಿಂದ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ಕೈಗೊಳ್ಳಲಿದೆ. 8 ದಿನಗಳ ಪಾದಯಾತ್ರೆಗೆ ಇಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 8.30ಕ್ಕೆ ಕೆಂಗೇರಿ ಕೆಂಪಮ್ಮ ದೇವಸ್ಥಾನದ ಸಮೀಪದ ಮಂಜುನಾಥ ಕನ್ವೆನ್ಷನ್ ಹಾಲ್ ಬಳಿಯಿಂದ ಯಾತ್ರೆ ಆರಂಭವಾಗಲಿದೆ. ದಿನಕ್ಕೆ 20 ಕಿಮೀಯಂತೆ 140 ಕಿಮೀವರೆಗೆ ಪಾದಯಾತ್ರೆ ಮಾಡಿ, ಮೈಸೂರಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಮಧ್ಯದಲ್ಲಿ ಪ್ರತಿಭಟನೆ ಮತ್ತು ಸಮಾರಂಭಗಳನ್ನೂ ಕೂಡ ಬಿಜೆಪಿ ಆಯೋಜಿಸಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ರಣತಂತ್ರ ಹೆಣೆದು, ಪಾದಯಾತ್ರೆ ನಡೆಯುವ ಸ್ಥಳಗಳಲ್ಲಿ ನೈತಿಕತೆ ಪ್ರಶ್ನೆ ಸಭೆ ಆಯೋಜಿಸಿ ಬಿಜೆಪಿ ಸರ್ಕಾರದ ಹಗರಣಗಳನ್ನು ಬಿಚ್ಚಿಡಲಿದೆ.
ಇದನ್ನೂ ಓದಿ: ಯಾವ ಪುರುಷಾರ್ಥಕ್ಕೆ ಪಾದಯಾತ್ರೆ?: ಸಚಿವ ಕೃಷ್ಣ ಬೈರೇಗೌಡ - Krishna Byregowda