ನವದೆಹಲಿ/ಬೆಂಗಳೂರು: ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಿರುವ ಹೆಸರನ್ನು ಮತ್ತೆ ರಾಮನಗರ ಎಂದು ಬದಲಿಸುವುದು ಅವರ (ಹೆಚ್.ಡಿ.ಕುಮಾರಸ್ವಾಮಿ) ಹಣೆಯಲ್ಲಿ ಬರೆದಿಲ್ಲ ಎಂದು ಹೇಳಿಕೆ ನೀಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಇಂತಹ ಹೇಳಿಕೆಗಳನ್ನು ಕೊಟ್ಟವರು ಏನೇನಾಗಿದ್ದಾರೆ ಎನ್ನುವುದು ಗೊತ್ತಿದೆ ಎಂದು ಕುಟುಕಿದ್ದಾರೆ.
ನವದೆಹಲಿಯಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ರಾಮನಗರದ ಹೆಸರು ಮರುಸ್ಥಾಪನೆ ಸಾಧ್ಯವಿಲ್ಲ ಅಂತ ಡಿಸಿಎಂ ಹೇಳಿಕೆ ನೀಡಿದ್ದಾರೆ. ಹಿಂದೆ ಈ ರೀತಿಯ ಹೇಳಿಕೆಯನ್ನು ಬಹಳ ಜನ ಹೇಳಿದ್ದಾರೆ. ಆಮೇಲೆ ಅವರು ಏನೇನಾಗಿದ್ದಾರೆ ಎನ್ನುವುದನ್ನೂ ನೋಡಿದ್ದೇನೆ ಎಂದರು.
ಮುಂದಿನ ಹತ್ತು, ಇಪ್ಪತ್ತು ವರ್ಷ ಕರ್ನಾಟಕದಲ್ಲಿ ನಮ್ಮದೇ ಸರ್ಕಾರ ಎಂದು ಹೇಳಿದ್ದಾರೆ. ಇಂತಹ ಹೇಳಿಕೆ ನೀಡಿ ಒಂದೇ ವರ್ಷದಲ್ಲಿ ಹೋದವರು ಬಹಳ ಜನರಿದ್ದಾರೆ. ಈ ಸರ್ಕಾರ ಮಾಡಿರುವ ಅಕ್ರಮಗಳು, ಜನ ವಿರೋಧಿ ಚಟುವಟಿಕೆಗಳು ಎಷ್ಟಿವೆ ಎಂದರೆ ನಾಳೆ ಬೆಳಗ್ಗೆ ಚುನಾವಣೆ ನಡೆದರೆ ಜನರೇ ಇವರನ್ನು ಮನೆಗೆ ಕಳಿಸುತ್ತಾರೆ ಎಂದು ಕುಮಾರಸ್ವಾಮಿ ಟಾಂಗ್ ಕೊಟ್ಟರು.
ನಾನು ಈ ಹೇಳಿಕೆಯನ್ನು ಕಾಟಾಚಾರಕ್ಕೆ ನೀಡಿಲ್ಲ, ಇದು ನನ್ನ ಜೀವನದ ಗುರಿ. ಯಾವ ಘನಂದಾರಿ ಕೆಲಸ ಮಾಡಿದ್ದಾರೆ ಎಂದು ಜನ ಇವರಿಗೆ ಮತ ಕೊಡುತ್ತಾರೆ? ಶಾಶ್ವತವಾಗಿ ಕೂರಲು ಗೂಟ ಹೊಡೆದುಕೊಂಡಿರಲಿ, ಅಲ್ಲಿರುತ್ತಾರೋ, ಇನ್ನೆಲ್ಲಿರುತ್ತಾರೋ ನೋಡೋಣ. ರಾಮನಗರದ ವಿಚಾರದಲ್ಲಿ ಅವರ ನಿರ್ಧಾರಕ್ಕೆ ಅವರೇ ಪ್ರಾಯಶ್ಚಿತ್ತ ಪಡಬೇಕಾಗುತ್ತದೆ. ದೊಡ್ಡಮಟ್ಟದಲ್ಲಿ ಬೆಲೆ ತೆರಬೇಕಾಗುತ್ತದೆ ಎಂದು ಹೆಚ್‌ಡಿಕೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ನಾಮಕರಣ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನ - Ramanagara rename
ರಾಮನಗರ 'ಬೆಂಗಳೂರು ದಕ್ಷಿಣ' ಎಂದು ಮರುನಾಮಕರಣ: ಎರಡು ದಿನಗಳ ಹಿಂದಷ್ಟೇ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಹೆಸರು ಬದಲಾಯಿಸಲು ತೀರ್ಮಾನಿಸಲಾಗಿತ್ತು.
ಜುಲೈ 9ರಂದು ಡಿ.ಕೆ.ಶಿವಕುಮಾರ್ ನೇತೃತ್ವದ ನಿಯೋಗ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮರುನಾಮಕರಣ ಮಾಡಿ, ರಾಮನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸುವಂತೆ ಕೋರಿ ಸಿಎಂ ಸಿದ್ದರಾಮಯ್ಯಗೆ ಮನವಿ ಪತ್ರ ಸಲ್ಲಿಸಿತ್ತು.
ಇದನ್ನೂ ಓದಿ: ರಾಮನಗರ ಹೆಸರು ಬದಲಾವಣೆ ಮಾಡಿದವರು ಸರ್ವನಾಶ ಆಗ್ತಾರೆ: ಹೆಚ್.ಡಿ.ಕುಮಾರಸ್ವಾಮಿ ಕಿಡಿ - Union Minister H D Kumaraswamy