ಹಾಸನ : ಕಗ್ಗಂಟಾಗಿದ್ದ ಮೈತ್ರಿಯ ಅಭ್ಯರ್ಥಿಗಳ ಎರಡು ಕ್ಷೇತ್ರಗಳನ್ನು ಕೊನೆಗೂ ಫೈನಲ್ ಮಾಡಿದ್ದು, ಜನರ ಒತ್ತಾಯದ ಮೇರೆಗೆ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಹೆಚ್.ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡಲಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಘೋಷಣೆ ಮಾಡಿದ್ದಾರೆ. ಆದರೆ ಅಧಿಕೃತ ಮಾಹಿತಿ ಹೊರಬೀಳಬೇಕಿರುವುದು ಮಾತ್ರ ಬಾಕಿ ಉಳಿದಿದೆ.
ಹಾಸನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ನೀವೇ ನಿಲ್ಲಬೇಕು ಎಂದು ಜನತೆ ಹಠ ಮಾಡುತ್ತಿದ್ದಾರೆ. ಹೀಗಾಗಿ ಮಂಡ್ಯ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಲೋಕಸಭೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಕುಮಾರಸ್ವಾಮಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಬಂದ ಕೂಡಲೇ ಮಂಡ್ಯಕ್ಕೆ ಬನ್ನಿ ಎಂದಿದ್ದಾರೆ. ಇವತ್ತು ಕೋರ್ ಕಮಿಟಿ ಸಭೆಯಲ್ಲೂ ನೀವೇ ನಿಲ್ಲಬೇಕು ಎಂದಿದ್ದಾರೆ. ಈ ಬಾರಿ ಆದರೂ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಗೆಲ್ಲಿಸಿಕೊಡಬೇಕು ಎಂದು ಹೆಚ್.ಡಿ ದೇವೇಗೌಡ ಮನವಿ ಮಾಡಿದರು.
ಇನ್ನು ಕೋಲಾರ ಕ್ಷೇತ್ರದ ಅಭ್ಯರ್ಥಿಯ ವಿಚಾರದ ಬಗ್ಗೆ ಕೇಳಿದಾಗ, ಅಲ್ಲಿಯೂ ಕೂಡ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಲ್ಲೇಶ್ ಬಾಬು ಅವರರು ಟಿಕೆಟ್ ಕೇಳಿದ್ದು, ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಅಧಿಕೃತವಾಗಿ ಅಭ್ಯರ್ಥಿಗಳ ಹೆಸರು ಎಲ್ಲಿಯೂ ಘೋಷಣೆ ಆಗದಿದ್ದರೂ, ಮಂಡ್ಯದಿಂದ ಹೆಚ್. ಡಿ ಕುಮಾರಸ್ವಾಮಿ ಅವರು ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಕೋಲಾರದಿಂದ ಮಲ್ಲೇಶ್ ಬಾಬು ಹಾಗೂ ಹಾಸನದಲ್ಲಿ ಅಭ್ಯರ್ಥಿ ಯಾರು ಎಂಬುದು ಘೋಷಣೆ ಆಗದಿದ್ದರೂ ಪ್ರಜ್ವಲ್ ರೇವಣ್ಣ ಎಂಬ ಮಾಹಿತಿ ಮೂಲಗಳಿಂದ ಬಂದಿದೆ. ಆದರೆ, ಹೆಚ್.ಪಿ ಕಿರಣ್ ಈಗಾಗಲೇ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದ್ದಾರೆ.
ಹೆಚ್ಡಿಕೆ ಆರೋಗ್ಯ ವಿಚಾರಿಸಿದ ಶೋಭಾ ಕರಂದ್ಲಾಜೆ : ಮತ್ತೊಂದೆಡೆ ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಆಗಿರುವ ಶೋಭಾ ಕರಂದ್ಲಾಜೆ ಹಾಗೂ ಇತರ ಬಿಜೆಪಿ ಮುಖಂಡರು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು. ಬೆಂಗಳೂರಿನ ಜೆಪಿ ನಗರದಲ್ಲಿರುವ ಹೆಚ್ಡಿಕೆ ನಿವಾಸಕ್ಕೆ ಇಂದು ಸಂಜೆ ಆಗಮಿಸಿದ ಬಿಜೆಪಿ ಮುಖಂಡರು, ಲೋಕಸಭೆ ಚುನಾವಣೆ, ಜೆಡಿಎಸ್ ಬಿಜೆಪಿ ಮೈತ್ರಿ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ತಮಗೆ ಸಹಕಾರ ನೀಡುವಂತೆ ಶೋಭಾ ಕರಂದ್ಲಾಜೆ ಅವರು ಹೆಚ್ಡಿಕೆಗೆ ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಮಾಜಿ ಉಪಮುಖ್ಯಮಂತ್ರಿ ಸಿ.ಎನ್ ಅಶ್ವತ್ಥ ನಾರಾಯಣ್, ದಾಸರಹಳ್ಳಿ ಶಾಸಕ ಮುನಿರಾಜು, ಯಶವಂತಪುರದ ಜೆಡಿಎಸ್ ಮುಖಂಡ ಟಿ.ಎನ್ ಜವರಾಯಿಗೌಡ, ನಿಖಿಲ್ ಕುಮಾರಸ್ವಾಮಿ ಅವರು ಉಪಸ್ಥಿತರಿದ್ದರು.
ಇದನ್ನೂ ಓದಿ : ಮೃಣಾಲ್, ಪ್ರಿಯಾಂಕಾ ಎಂಪಿ ಆಗುವುದರಲ್ಲಿ ಸಂಶಯವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ - Lokashaba election