ಸುಬ್ರಹ್ಮಣ್ಯ (ದಕ್ಷಿಣ ಕನ್ನಡ) : ವಿಶ್ವಪ್ರಸಿದ್ಧ ನಾಗಾರಾಧನೆಯ ಪುಣ್ಯ ತಾಣವಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶುಕ್ರವಾರ ಸಂಜೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮತ್ತು ಅವರ ಪತ್ನಿ ಚೆನ್ನಮ್ಮ ದೇವೇಗೌಡ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ವಸತಿ ಗೃಹಕ್ಕೆ ಆಗಮಿಸಿದ ದೇವೇಗೌಡರನ್ನು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಂ ಎಸ್ ಸುಳ್ಳಿ ಅವರು ಪುಷ್ಪಗುಚ್ಛ ನೀಡಿ ಬರಮಾಡಿಕೊಂಡರು. ಬಳಿಕ ದೇವೇಗೌಡ ದಂಪತಿ ಆದಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವರ ದರ್ಶನ ಪಡೆದು ಸೇವೆ ನೆರವೇರಿಸಿ ಮೃತ್ತಿಕಾ ಪ್ರಸಾದವನ್ನು ಸ್ವೀಕರಿಸಿದರು. ದೇವಳದ ಅರ್ಚಕರು ದಂಪತಿಗೆ ಶಾಲು ಹೊದಿಸಿ ಪ್ರಸಾದ ವಿತರಿಸಿದರು.
ಅಲ್ಲಿಂದ ಶ್ರೀ ದೇವಳದ ಗೋಪುರದ ಬಳಿ ಮಂಗಳವಾದ್ಯದ ಮೂಲಕ ಮಾಜಿ ಪ್ರಧಾನಿಯನ್ನು ಕರೆದೊಯ್ಯಲಾಯಿತು. ಯಶಸ್ವಿ ಆನೆಯು ದೇವೇಗೌಡರನ್ನು ತನ್ನ ಸೊಂಡಿಲಿನಿಂದ ಆಶೀರ್ವದಿಸಿತು. ಶ್ರೀ ದೇವರ ದರ್ಶನ ಮಾಡಿದ ಅವರಿಗೆ ಅರ್ಚಕರು ಶಾಲು ಹೊದಿಸಿ ಮಹಾಪ್ರಸಾದ ನೀಡಿದರು. ಇದೇ ವೇಳೆ ಹೊಸಳಿಗಮ್ಮನ ದರ್ಶನ ಪಡೆದ ದೇವೇಗೌಡ ದಂಪತಿಗೆ ಪುರೋಹಿತರು ಕುಂಕುಮಾರ್ಚನೆಯ ಪ್ರಸಾದವನ್ನು ನೀಡಿದರು. ಶ್ರೀ ದೇವರ ದರ್ಶನ ಪಡೆದ ಬಳಿಕ ಆದಿಶೇಷ ಗೆಸ್ಟ್ ಹೌಸ್‌ಗೆ ಆಗಮಿಸಿದ ಮಾಜಿ ಪ್ರಧಾನಿ ಅವರು ಸುಮಾರು ಒಂದು ಗಂಟೆ ಕಾಲ ಪಾರಾಯಣ ಶ್ಲೋಕ ವಾಚಿಸಿದರು. ಬಳಿಕ ಶ್ರೀ ದೇವಳದಲ್ಲಿ ರಾತ್ರಿಯ ಪ್ರಸಾದ ಸೇವಿಸಿದರು.
ಇಂದು ಜ.27 ರಂದು ಬೆಳಗ್ಗೆ ಶ್ರೀ ದೇವಳದಲ್ಲಿ ದೇವೇಗೌಡ ದಂಪತಿ ಸಂಕಲ್ಪ ನೆರವೇರಿಸಿ ಆಶ್ಲೇಷ ಬಲಿ ಸೇವೆ ಮತ್ತು ಮಧ್ಯಾಹ್ನದ ಮಹಾಪೂಜೆಯನ್ನು ವೀಕ್ಷಿಸಿ, ಮಹಾಪೂಜಾ ಸೇವೆ ನೆರವೇರಿಸಲಿದ್ದಾರೆ. ಬಳಿಕ ಮಧ್ಯಾಹ್ನದ ಪ್ರಸಾದವನ್ನು ಸ್ವೀಕರಿಸಲಿದ್ದಾರೆ. ಈ ಎಲ್ಲಾ ಕಾರ್ಯಗಳು ಮುಗಿದ ಮೇಲೆ ಕಡಬ ತಾಲೂಕಿನ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಿರ್ಮಿಸಿದ ಹೆಲಿಪ್ಯಾಡ್‌ಗೆ ತೆರಳಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಳಿದ್ದಾರೆ.
ಇದನ್ನೂ ಓದಿ : ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಹೆಚ್ಡಿಕೆ ಅಭಿನಂದನೆ; ಇಂದು ಕುಕ್ಕೆಗೆ ದೇವೇಗೌಡ ಭೇಟಿ