ಬೆಂಗಳೂರು: ಇನ್ವೆಸ್ಟ್ ಕರ್ನಾಟಕ 2022 (ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ)ದಲ್ಲಿ 3ಡಿ ವಿಡಿಯೋ ನಿರ್ಮಿಸಲು ನೇಮಕಗೊಂಡಿದ್ದ ಎಂ/ಎಸ್ ಬಿಬಿಪಿ ಸ್ಟುಡಿಯೋ ವರ್ಚುವಲ್ ಭಾರತ್ ಪ್ರೈವೇಟ್ ಲಿಮಿಟೆಡ್‌ಗೆ ಬಾಕಿ ಉಳಿಸಿಕೊಂಡಿದ್ದ ಮೊತ್ತ ಪಾವತಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್ ದ್ವಿಸದಸ್ಯ ಪೀಠ ರದ್ದುಪಡಿಸಿ ಆದೇಶಿಸಿತು.
ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.
ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಕುರಿತಂತೆ ಎಂ/ಎಸ್ ಬಿಬಿಪಿ ಸ್ಟುಡಿಯೋ ವರ್ಚುವಲ್ ಭಾರತ್ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿರುವ ವಿಡಿಯೋ ಅಗತ್ಯವಿರುವ ಎಲ್ಲ ಅಂಶಗಳನ್ನು ಒದಗಿಸಿಲ್ಲ. ಆದ್ದರಿಂದ ಕೊನೆಯ ಘಳಿಗೆಯಲ್ಲಿ ಒಪ್ಪಂದ ರದ್ದುಪಡಿಸಲಾಗಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಸರ್ಕಾರ ಮತ್ತು ಎಂ/ಎಸ್ ಬಿಬಿಪಿ ಸ್ಟುಡಿಯೋ ವರ್ಚುವಲ್ ಭಾರತ್ ಪ್ರೈವೇಟ್ ಲಿಮಿಟೆಡ್ ನಡುವೆ ಕೆಲವು ಷರತ್ತುಗಳಿಗೆ ಒಪ್ಪಿಗೆ ಸೂಚನೆ ನೀಡಲಾಗಿತ್ತು. ಈ ರೀತಿಯ ಷರತ್ತುಗಳ ಉಲ್ಲಂಘನೆಗಳು ಕರ್ನಾಟಕ(ದೇಶೀಯ ಮತ್ತು ಅಂತಾರಾಷ್ಟ್ರೀಯ)ನಿಯಮಗಳು 2012ರ ಅಡಿಯಲ್ಲಿ ಮಧ್ಯಸ್ಥಿಕೆ ಕೇಂದ್ರ ಇತ್ಯರ್ಥ ಪಡಿಸಬೇಕಾಗುತ್ತದೆ. ಹೀಗಿರುವಾಗಿ ಏಕ ಸದಸ್ಯ ಪೀಠ, ಅರ್ಜಿದಾರರನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ರವಾನಿಸಬೇಕಾಗಿತ್ತು. ಅದರ ಬದಲಾಗಿ ಬಾಕಿ ಪಾವತಿಗೆ ಆದೇಶಿಸಿದೆ. ಇದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಪೀಠ ಹೇಳಿತು.
ವಿಡಿಯೋ ಚಿತ್ರೀಕರಣ ಕುರಿತಂತೆ ಸರ್ಕಾರ ಮತ್ತು ಗುತ್ತಿಗೆದಾರರ ನಡುವಿನ ಒಪ್ಪಂದಕ್ಕೆ ಸಂಬಂಧಿಸಿದ ವಿವಾದವಾಗಿದೆ. ವಿಡಿಯೋ ವೀಕ್ಷಿಸಿದ್ದ ಆಂತರಿಕ ಸಮಿತಿ ವಿಡಿಯೋ ಅತ್ಯಂತ ಸಾಮಾನ್ಯವಾಗಿದ್ದು, ಕಳಪೆ ಮತ್ತು ಅಪೂರ್ಣವಾಗಿದೆ. ಹೀಗಾಗಿ ಗುತ್ತಿಗೆ ರದ್ದುಪಡಿಸಿದೆ. ಅಲ್ಲದೆ, ಗುತ್ತಿಗೆ ನಿಯಮಗಳ ಉಲ್ಲಂಘನೆ ವಿಷಯದಲ್ಲಿ ನ್ಯಾಯಾಲಯದ ಪರಿಶೀಲನಾ ವ್ಯಾಪ್ತಿ ಅತ್ಯಂತ ಸೀಮಿತವಾಗಿದೆ. ಅಪರೂಪದ ಪ್ರಕರಣದಲ್ಲಿ ಈ ರೀತಿಯ ಪ್ರಕರಣಗಳ ಕುರಿತು ಆದೇಶಿಸಬಹುದಾಗಿದೆ. ಪ್ರಸ್ತುತದ ಪ್ರಕರಣದಲ್ಲಿ ವಾಸ್ತವ ವಿಷಯಗಳ ಚರ್ಚಿಸದೆ ಬಾಕಿ ಮೊತ್ತ ಪಾವತಿ ಮಾಡುವಂತೆ ಏಕಸದಸ್ಯ ಪೀಠ ಆದೇಶಿಸುವಂತಿಲ್ಲ. ಒಪ್ಪಂದದ ನಿಯಮಗಳು, ಅದನ್ನು ಜಾರಿ ಮಾಡುವುದು ಮತ್ತು ಉಲ್ಲಂಘಿಸುವುದರ ಕುರಿತಂತೆ ನ್ಯಾಯಾಲಯ ಮಧ್ಯ ಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಇನ್ವೆಸ್ಟ್ ಕರ್ನಾಟಕ 2022ರ ಹೆಸರಿನಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ 2022ರ ನವೆಂಬರ್ 2 ಮತ್ತು 4 ರಂದು ಹಮ್ಮಿಕೊಳ್ಳಲಾಗಿತ್ತು. ಈ ಸಮಾವೇಶದಲ್ಲಿ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಕುರಿತಂತೆ ಬಿಂಬಿಸುವುದು ಮತ್ತು ವಿಶ್ವ ಮಟ್ಟದಲ್ಲಿ ಕಂಪೆನಿಗಳಿಗೆ ರಾಜ್ಯದ ಕೊಡುಗೆಗಳನ್ನು ವಿವರಿಸುವ ಕುರಿತ ವಿಡಿಯೋ ಚಿತ್ರ ಸಿದ್ದಪಡಿಸಲು ಎಂ/ಎಸ್ ಬಿಬಿಪಿ ಸ್ಟುಡಿಯೋ ವರ್ಚುವಲ್ ಭಾರತ್ ಪ್ರೈವೇಟ್ ಲಿಮಿಟೆಡ್‌ಗೆ ಕೋರಲಾಗಿತ್ತು.
2022ರ ಜೂನ್ 16 ರಂದು ಮೈಸೂರು ಸೇಲ್ಸ್ ಇಂಟರ್‌ನ್ಯಾಶನಲ್ ಲಿಮಿಟೆಡ್‌ನ ಅಂಗ ಸಂಸ್ಥೆಯಾಗಿರುವ ಮಾರ್ಕೆಟೆಂಗ್ ಕಮ್ಯೂನಿಕೇಷನ್ ಮತ್ತು ಅಡ್ವರ್ಟೈಸಿಂಗ್ ಲಿಮಿಟೆಡ್ ವತಿಯಿಂದ ವಿಡಿಯೋ ಚಿತ್ರೀಕರಣಕ್ಕೆ ಗುತ್ತಿಗೆ ಕರೆದಿತ್ತು. ಬಳಿಕ ಜುಲೈ 14ರಂದು ಮಾರ್ಕೆಟೆಂಗ್ ಕಮ್ಯೂನಿಕೇಷನ್ ಮತ್ತು ಅಡ್ವರ್ಟೈಸಿಂಗ್ ಲಿಮಿಟೆಡ್ ವತಿಯಿಂದ ಎಂ/ಎಸ್ ಬಿಬಿಪಿ ಸ್ಟುಡಿಯೋ ವರ್ಚುವಲ್ ಭಾರತ್ ಪ್ರೈವೇಟ್ ಲಿಮಿಟೆಡ್ ಅವರಿಗೆ ಗುತ್ತಿಗೆ ಮಂಜೂರಾಗಿರುವುದಾಗಿ ತಿಳಿಸಿ, ವಿಡಿಯೋ ಚಿತ್ರೀಕರಣ ಪಾರಂಭಿಸಲು ಕಾರ್ಯಾದೇಶವನ್ನು ನೀಡಿತ್ತು.
ಇದಾದ ಬಳಿಕ ಎಂ/ಎಸ್ ಬಿಬಿಪಿ ಸ್ಟುಡಿಯೋ ವರ್ಚುವಲ್ ಭಾರತ್ ಪ್ರೈವೇಟ್ ಲಿಮಿಟೆಡ್ ಅವರು ಮನವಿ ಸಲ್ಲಿಸಿ ವಿಡಿಯೋ ಚಿತ್ರೀಕರಣ ಪ್ರಾರಂಭಿಸಲು 1.5 ಕೋಟಿ ರೂ. ಗಳ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಹಣ ಬಿಡುಗಡೆಯಾದ ಬಳಿಕ 2022 ರ ಆಗಸ್ಟ್ 11ರಂದು ವಿಡಿಯೋ ಚಿತ್ರೀಕರಣ ಕಾರ್ಯ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಸಲ್ಲಿಸುವುದಾಗಿ ತಿಳಿಸಿತ್ತು.
ಈ ನಡುವೆ ಎಂ/ಎಸ್ ಬಿಬಿಪಿ ಸ್ಟುಡಿಯೋ ವರ್ಚುವಲ್ ಭಾರತ್ ಪ್ರೈವೇಟ್ ಲಿಮಿಟೆಡ್ ನೀಡಿದ್ದ ಗುತ್ತಿಗೆ ಹಿಂಪಡೆಯುತ್ತಿರುವ ಸಂಬಂಧ ಮಾಹಿತಿ ಲಭ್ಯವಾಗಿದ್ದು, ಇದಕ್ಕೆ ಕಾರಣವನ್ನು ತಿಳಿಸುವಂತೆ ಕೋರಿ, ಹಲವು ಬಾರಿ ಮನವಿ ಮಾಡಿದರು. ಈ ಸಂಬಂಧ ಯಾವುದೇ ಪ್ರತಿಕ್ರಿಯೆ ಲಭ್ಯವಾಗದ ಹಿನ್ನೆಲೆಯಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ, ಸಚಿವರೊಬ್ಬರ ಸೂಚನೆ ಮೇರೆಗೆ ಗುತ್ತಿಗೆ ರದ್ದು ಮಾಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಎಂ/ಎಸ್ ಬಿಬಿಪಿ ಸ್ಟುಡಿಯೋ ವರ್ಚುವಲ್ ಭಾರತ್ ಪ್ರೈವೇಟ್ ಲಿಮಿಟೆಡ್ ಸರಿಯಾದ ರೀತಿಯಲ್ಲಿ ಚಿತ್ರೀಕರಣ ಮಾಡಿಲ್ಲ ಎಂಬ ಅಂಶವನ್ನು ಪರಿಗಣಿಸದೆ, ಗುತ್ತಿಗೆ ಆದೇಶ ರದ್ದುಪಡಿಸಿದೆ. ಇದರಲ್ಲಿ ರಾಜಕೀಯ ಹಸ್ತಕ್ಷೇಪವಿದೆ ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೆ, ಬಾಕಿ ಮೊತ್ತವನ್ನು ಪಾವತಿಸಲು ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತ್ತು.
ಇದನ್ನೂ ಓದಿ: ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿಂದ ಒಂದೇ ದಿನ 600 ಅರ್ಜಿಗಳ ವಿಚಾರಣೆ! - High Court Judge Nagaprasanna