ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕೃತ ಲಾಂಛನ, ಚಿಹ್ನೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯುವ ಕುರಿತಾದ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಈ ವಿಚಾರವಾಗಿ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಟಿ. ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ಕೈಗೆತ್ತಿಕೊಂಡಿತು. ಈ ವೇಳೆ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಕೇಂದ್ರ ಗೃಹ ಸಚಿವಾಲಯದ ನಿರ್ದೇಶಕರು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯದ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿತು.
ಮಾನವ ಹಕ್ಕುಗಳ ಆಯೋಗ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಂವಿಧಾನಿಕ ಸಂಸ್ಥೆಗಳ ಹೆಸರು, ಲಾಂಛನ ಮತ್ತು ಚಿಹ್ನೆಗಳು ಹೋಲುವಂತಹ ಹೆಸರು, ಲಾಂಛನ ಮತ್ತು ಚಿಹ್ನೆಗಳನ್ನು ಖಾಸಗಿ ವ್ಯಕ್ತಿಗಳು ಮತ್ತು ಸಂಘ-ಸಂಸ್ಥೆಗಳು ತಮ್ಮ ವಾಹನಗಳಿಗೆ ಹಾಕಿಕೊಳ್ಳುತ್ತಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಹೈಕೋರ್ಟ್‌ನ ಏಕ ಸದಸ್ಯ ನ್ಯಾಯಪೀಠ, ಈ ಸಂಬಂಧ ಕಾಯ್ದೆ-ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುವಂತೆ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿಗೆ 2023ರ ಜೂ.9 ರಂದು ನಿರ್ದೇಶನ ನೀಡಿತ್ತು. ಅದರಂತೆ ಈ ಅರ್ಜಿ ದಾಖಲಿಸಲಾಗಿದೆ.
ರಾಷ್ಟ್ರ ಲಾಂಛನ ಮತ್ತು ಹೆಸರು (ಅನುಚಿತ ಬಳಕೆ ನಿಷೇಧ) ಅಧಿನಿಯಮ-1950, ಲಾಂಛನ ಮತ್ತು ಹೆಸರು (ಅನುಚಿತ ಬಳಕೆ ನಿಷೇಧ) ನಿಯಮಗಳು-1982, ಭಾರತದ ರಾಷ್ಟ್ರ ಲಾಂಛನ (ಅನುಚಿತ ಬಳಕೆ ನಿಷೇಧ) ಕಾಯ್ದೆ-2005, ರಾಷ್ಟ್ರ ಲಾಂಛನ (ಬಳಕೆ ನಿಯಂತ್ರಣ) ನಿಯಮಗಳು-2007 ಮತ್ತು 2010 ಹಾಗೂ ಕರ್ನಾಟಕ ಮೋಟಾರು ವಾಹನ ಅಧಿನಿಯಮದ ನಿಯಮ (145)(ಎ) ಮತ್ತು ಕೇಂದ್ರ ಮೋಟಾರು ವಾಹನ ಅಧಿನಿಯಮದ ನಿಯಮ (50) ಮತ್ತು (51)ನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೊಲೆ ಖಂಡಿಸಿ ಪ್ರತಿಭಟನೆ: ಚಕ್ರವರ್ತಿ ಸೂಲಿಬೆಲೆ ವಿರುದ್ಧದ ಪ್ರಕರಣ ರದ್ದು