ಬೆಂಗಳೂರು: ಬೀದರ್ ಜಿಲ್ಲೆಯ ಕಮಲಾನಗರ, ಹುಲಸೂರ, ಚಿಟಗುಪ್ಪಾ ತಾಲೂಕುಗಳ ಸರ್ಕಾರಿ ಆಸ್ಪತ್ರೆಗಳನ್ನು ತಾಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆಗಳನ್ನಾಗಿ ಮೇಲ್ದರ್ಜೆಗೇರಿಸಬೇಕು ಮತ್ತು ಅಲ್ಲಿ ಅಗತ್ಯ ಮೂಲಸೌಕರ್ಯ ಮತ್ತು ವೈದ್ಯಕೀಯ ಸೇವೆಗಳನ್ನು ಕಲ್ಪಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿ ಕುರಿತು ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಬೀದರ್ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಅಲ್ಲದೇ, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಲಬುರಗಿ ವಲಯದ ಪ್ರಾದೇಶಿಕ ಆಯುಕ್ತರು, ಬೀದರ್ ಜಿಲ್ಲಾಧಿಕಾರಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ನಿರ್ದೇಶನ ನೀಡಿ ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಈ ಮೂರು ತಾಲೂಕುಗಳನ್ನು ರಾಜ್ಯ ಸರ್ಕಾರ 2018ರಲ್ಲಿ ಹೊಸದಾಗಿ ರಚನೆ ಮಾಡಿತ್ತು. ಆದರೆ, ಇಲ್ಲಿನ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಿಲ್ಲ. ತಜ್ಞ ವೈದ್ಯರಿಲ್ಲ, ಶಸ್ತ್ರಚಿಕಿತ್ಸಾ ಕೊಠಡಿ ಇಲ್ಲ, ಡಯಾಲಿಸಿಸ್ ಸೇವೆ ಪ್ರಾರಂಭಿಸಿಲ್ಲ.
ಆಧುನಿಕ ಪ್ರಯೋಗಾಲಯ ಇಲ್ಲ. ಹೀಗಾಗಿ ಅಗತ್ಯ ವೈದ್ಯಕೀಯ ಸೇವೆಗಳು ಲಭ್ಯವಾಗದೇ ಈ ತಾಲೂಕಿನ ಜನ ಅಕ್ಕ - ಪಕ್ಕದ ತಾಲೂಕುಗಳಿಗೆ 50 ರಿಂದ 70 ಕಿ.ಮೀ ದೂರ ಪ್ರಯಾಣ ಮಾಡಬೇಕಾಗುತ್ತದೆ. ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಈ ಮೂರು ತಾಲೂಕುಗಳಲ್ಲಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಅವಶ್ಯತೆ ಇದೆ ಎಂದು ನ್ಯಾಯಪೀಠಕ್ಕೆ ಕೋರಿದರು.
ಕಮಲಾನಗರ, ಹುಲಸೂರ, ಚಿಟಗುಪ್ಪಾ ತಾಲೂಕುಗಳಲ್ಲಿನ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಈ ನಿಟ್ಟಿನಲ್ಲಿ ಅರ್ಜಿದಾರರು 2023ರ ನವೆಂಬರ್ 8ರಂದು ಸಲ್ಲಿಸಿರುವ ಮನವಿ ಪರಿಗಣಿಸುವಂತೆ ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಇದನ್ನೂ ಓದಿ: ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿಂದ ಒಂದೇ ದಿನ 600 ಅರ್ಜಿಗಳ ವಿಚಾರಣೆ! - High Court Judge Nagaprasanna