ಬೆಂಗಳೂರು: ದುರುದ್ದೇಶಪೂರಿತ ನಡುವಳಿಕೆಗಳನ್ನು ಮಕ್ಕಳ ಮೇಲೆ ಪೋಷಕರು ಪ್ರಯೋಗ ಮಾಡುತ್ತಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಮಗಳ ಮೇಲೆ ಮಲತಂದೆಯಿಂದ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ದಾಖಲಿಸಿದ್ದ ಪ್ರಕರಣ ಮತ್ತದರ ಸಂಬಂಧ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಯನ್ನು ರದ್ದುಪಡಿಸಿ ಆದೇಶಿಸಿದೆ.
ಮಹಿಳೆಯ ಮೂರನೇ ಪತಿಯ ವಿರುದ್ಧ ಮೊದಲ ಪತಿ ದಾಖಲಿಸಿದ್ದ ಪ್ರಕರಣ ರದ್ದುಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಸಂಸಾರದಲ್ಲಿ ಉಂಟಾಗುವ ಗೊಂದಲದಿಂದ ಪೋಷಕರು ತಮ್ಮ ಸ್ವಂತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದ ನಡೆದಿದೆ ಎಂದು ಆರೋಪಿಸಿ ಬಳಿಕ ಮರೆತು ಬಿಡುತ್ತಾರೆ. ಆದರೆ, ಈ ರೀತಿಯ ಪ್ರಕರಣಗಳು ಮಗುವಿನ ಮೇಲೆ ಬೀರುವ ನಕಾರಾತ್ಮಕ ಪರಿಣಾಮ ಊಹಿಸಲು ಸಾಧ್ಯವಿಲ್ಲ. ಆದ್ದರಿಂದ ಈ ರೀತಿಯ ಆರೋಪ ಮಾಡುವುದಕ್ಕೂ ಮುನ್ನ ಪೋಷಕರು ಆಲೋಚನೆ ಮತ್ತು ಆತ್ಮಾವಲೋಕನಕ್ಕೆ ಒಳಗಾಗಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಈ ರೀತಿಯ ಆರೋಪಗಳು ನಿಜವೇ ಆಗಿದ್ದರೆ, ಕಾನೂನು ತನ್ನ ಕರ್ತವ್ಯ ನಿರ್ವಹಿಸಲಿದೆ. ಆದರೆ, ಪ್ರಸ್ತುತ ಪ್ರಕರಣದಲ್ಲಿ ಮಗು ವಶಕ್ಕೆ ನೀಡದ ಉದ್ದೇಶಕ್ಕಾಗಿ ಸುಳ್ಳು ದೂರು ದಾಖಲಿಸುವಂತಹ ಬೆಳವಣಿಗೆಗಳಿಗಿಂತಲೂ ದೊಡ್ಡ ಪಾಪ ಮತ್ತೊಂದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಮಹಿಳೆಯು ಅರ್ಜಿದಾರರನ್ನು ಮದುವೆಯಾಗಿದ್ದಕ್ಕೆ ದ್ವೇಷ ಸಾಧಿಸಲು ಕಾನೂನು ದುರುಪಯೋಗಪಡಿಸಿಕೊಂಡಿರುವುದು ಸ್ಪಷ್ಟವಾಗಿದೆ. ಮಕ್ಕಳನ್ನು ದೌರ್ಜನ್ಯದಿಂದ ರಕ್ಷಿಸಲು ಉದ್ದೇಶಿಸಿರುವ ಪೋಕ್ಸೊ ಕಾಯ್ದೆಯನ್ನೂ ದುರ್ಬಳಕೆ ಮಾಡಿಕೊಂಡಿರುವುದು ದುರದೃಷ್ಟಕರ ಸಂಗತಿ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ನಟ ಕಬೀರ್ ಬೇಡಿಯ ಪುಸ್ತಕ ಮಾರಾಟಕ್ಕೆ ನಿರ್ಬಂಧ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಪ್ರಕರಣದ ಹಿನ್ನೆಲೆ ಏನು? ಪ್ರಕರಣದಲ್ಲಿ ಬಾಲಕಿಯ ತಾಯಿ ಮತ್ತು ಜೈವಿಕ ತಂದೆ 2017 ರಲ್ಲಿ ವಿಚ್ಛೇದನ ಪಡೆದಿದ್ದರು. ಆದರೆ, ಬಾಲಕಿಯನ್ನು ತಾಯಿಗೆ ನೀಡಲಾಗಿತ್ತು. ತಂದೆಗೆ ಮಗುವನ್ನು ಭೇಟಿ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೂ, ಒಪ್ಪಂದದ ಪ್ರಕಾರ, ಪೋಷಕರಲ್ಲಿ ಯಾರಾದರೂ ಒಬ್ಬರು ದೂರದ ಊರುಗಳಿಗೆ ಪ್ರಯಾಣಿಸುವಾಗ ಬಾಲಕಿ ಪ್ರಯಾಣಿಸದೇ ಮನೆಯಲ್ಲಿರುವ ಪೋಷಕರೊಂದಿಗೆ ಉಳಿಯಬೇಕಾಗಿತ್ತು.
ತಾಯಿ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಿದ್ದ ಸಂದರ್ಭದಲ್ಲಿ ಮಗಳನ್ನು ಮೂರನೇ ಪತಿ (ಅರ್ಜಿದಾರ) ಬಳಿ ಬಿಟ್ಟಿದ್ದರು. ಇದರಿಂದ ಕೊಪಗೊಂಡಿದ್ದ ಮೊದಲ ಪತಿ, ತನ್ನ ಮಗಳ ಮೇಲೆ ಲೈಂಗಿಕ ಕಿರುಕುಳ ನಡೆಸಲಾಗಿದೆ ಎಂದು ಆರೋಪಿಸಿ ತನ್ನ ಮಾಜಿ ಪತ್ನಿಯ ಮೂರನೇ ಪತಿ ಹಾಗೂ ಸಂಬಂಧಿಯ ವಿರುದ್ಧ ದೂರು ನೀಡಿದ್ದು, ದೂರಿನ ಸಂಬಂಧ ಆರೋಪ ಪಟ್ಟಿ ಸಲ್ಲಿಕೆಯಾಗಿತ್ತು. ಇದನ್ನು ಪ್ರಶ್ನಿಸಿದ್ದ ಮೂರನೇ ಪತಿ, ತನ್ನ ವಿರುದ್ಧ ಐಪಿಸಿಯ ವಿವಿಧ ಕಲಂಗಳು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ದಾಖಲಾದ ಪ್ರಕರಣ ವಿಚಾರಣೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಸಿಜೆ ಆಗಿ ಎನ್.ವಿ.ಅಂಜಾರಿಯಾ ನೇಮಕಕ್ಕೆ ಕೊಲಿಜಿಯಂ ಶಿಫಾರಸು