ಹಾವೇರಿ: ರಸ್ತೆ ನಿರ್ಮಾಣಕ್ಕೆ ವಶಕ್ಕೆ ಪಡೆದ ಜಮೀನಿಗೆ ಹಣ ನೀಡದ ಕಾರಣ ನ್ಯಾಯಾಲಯದ ಆದೇಶದಂತೆ ಹಾವೇರಿ ಉಪವಿಭಾಗಾಧಿಕಾರಿ ಕಚೇರಿಯ ಪೀಠೋಪಕರಗಳನ್ನು ಜಪ್ತಿ ಮಾಡಲಾಗಿದೆ. ಹಾವೇರಿಯ ಸ್ವಾತಂತ್ರ್ಯ ಹೋರಾಟಗಾರ ಸಿದ್ದಪ್ಪ ಹೊಸಮನಿ ಕುಟುಂಬಕ್ಕೆ ಸೇರಿದ 7 ಗುಂಟೆ ಜಮೀನನ್ನು 1967ರಲ್ಲಿ ಸರ್ಕಾರ ವಶಕ್ಕೆ ಪಡೆದಿತ್ತು.
ಹಾವೇರಿ ಎಪಿಎಂಸಿಯಿಂದ ಗಣಜೂರುವರೆಗೆ ನಿರ್ಮಾಣವಾದ ರಸ್ತೆಗೆ ಹೊಸಮನಿ ಕುಟುಂಬದ ಜಮೀನು ಭೂಸ್ವಾಧೀನಪಡಿಸಿಕೊಂಡು ರಸ್ತೆ ನಿರ್ಮಿಸಲಾಗಿತ್ತು. 2006 ರವರೆಗೂ ಪರಿಹಾರ ಬಾರದ ಹಿನ್ನೆಲೆಯಲ್ಲಿ ಈ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿತ್ತು. ಅಂದು ನ್ಯಾಯಾಲಯವು ಗುಂಟೆಗೆ 50 ಸಾವಿರದಂತೆ ಏಳು ಗುಂಟೆ ಜಮೀನಿಗೆ ದರ ನಿಗದಿ ಮಾಡಿ ಪರಿಹಾರ ನೀಡುವಂತೆ ಸೂಚಿಸಿತ್ತು.
ಆದರೆ, ಭೂಮಿಗೆ ದರ ಕಡಿಮೆಯಾಯಿತು ಎಂದು ಹೊಸಮನಿ ಕುಟುಂಬ ಮತ್ತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಬಡ್ಡಿಸಮೇತ 55,32,343 ರೂಪಾಯಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು. 02/03/2024ರಂದು ನ್ಯಾಯಾಲಯದ ಆದೇಶವನ್ನು ಉಪವಿಭಾಗಾಧಿಕಾರಿ ಕಚೇರಿಗೆ ತಿಳಿಸಲಾಗಿತ್ತು. ಆದರೆ, ಪರಿಹಾರ ನೀಡಲು ಉಪವಿಭಾಗಾಧಿಕಾರಿ ವಿಫಲರಾದ ಕಾರಣ ಎಸಿ ಕಚೇರಿಯ ಪೀಠೋಪಕರಣಗಳ ಜಪ್ತಿಗೆ ಡಿಹೆಚ್ಆರ್ ಅಶೋಕ ನೀರಲಗಿ ಮುಂದಾಗಿದ್ದಾರೆ.
ಬೆಳಗ್ಗೆ ಎಸಿ ಕಚೇರಿಗೆ ಆಗಮಿಸಿದ ವಕೀಲ ಅಶೋಕ ನೀರಲಗಿ ಮತ್ತು ಕೋರ್ಟ್ ಸಿಬ್ಬಂದಿ ಕಚೇರಿಯಲ್ಲಿರುವ ಪೀಠೋಪಕರಣಗಳು, ಕಂಪ್ಯೂಟರ್ ಸೇರಿದಂತೆ ವಿವಿಧ ಪರಿಕರಗಳನ್ನು ಜಪ್ತಿ ಮಾಡಿದರು. ಕಚೇರಿ ಸಿಬ್ಬಂದಿಯನ್ನು ಹೊರಗೆ ಕಳುಹಿಸಿದ ಸಿಬ್ಬಂದಿ ಖುರ್ಚಿ, ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ ವಿವಿಧ ವಿದ್ಯುನ್ಮಾನ ಯಂತ್ರಗಳನ್ನು ವಶಕ್ಕೆ ಪಡೆದರು.
ಇದನ್ನೂ ಓದಿ: ಟ್ಯಾಪ್‌ಗೆ ಏರಿಯೇಟರ್ ಹಾಕಿಸಿಕೊಳ್ಳಿ, ವಾಟರ್ ಬಿಲ್ ತಗ್ಗಿಸಿ! ಬೆಂಗಳೂರಿನಲ್ಲಿದು ಕಡ್ಡಾಯ