ಹಾವೇರಿ: ಕರ್ನಾಟಕ ರತ್ನ ಡಾ.ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಇಂದಿಗೆ ಮೂರು ವರ್ಷ. ಈ ಹಿನ್ನೆಲೆ ರಾಜ್ಯದ ವಿವಿಧೆಡೆ ಪುನೀತ್ ಪುಣ್ಯತಿಥಿ ನಡೆಸಲಾಗುತ್ತಿದೆ. ಹಾವೇರಿ ತಾಲೂಕಿನ ಯಲಗಚ್ಚ ಗ್ರಾಮದ ಅಪ್ಪು ಅಪ್ಪಟ ಅಭಿಮಾನಿ ಪ್ರಕಾಶ್ ಮೊರಬದ ಅವರು ನಿರ್ಮಿಸಿರುವ ಅಪ್ಪು ದೇವಸ್ಥಾನದಲ್ಲಿ ಅವರ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಕಳೆದ ಸೆಪ್ಟೆಂಬರ್ 26ರಂದು ಲೋಕಾರ್ಪಣೆಗೊಂಡ ಪುನೀತ್ ದೇವಾಲಯದಲ್ಲಿ ಪ್ರಕಾಶ್ ದಿನನಿತ್ಯ ಅಪ್ಪು ಅವರಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ದೂರ ದೂರದ ಊರುಗಳಿಂದ ಪುನೀತ್ ದೇವಸ್ಥಾನ ನೋಡಲು ಬಂದ ಅಭಿಮಾನಿಗಳು ಪುನೀತ್ ಪ್ರತಿಮೆಗೆ ಪೂಜೆ ಸಲ್ಲಿಸುತ್ತಿದ್ದಾರೆ. ಪುನೀತ್ ಪುಣ್ಯತಿಥಿ ಅಂಗವಾಗಿ ಇಂದು ಅಭಿಮಾನಿಗಳ ದಂಡೇ ಯಲಗಚ್ಚ ಗ್ರಾಮಕ್ಕೆ ಆಗಮಿಸಿದ್ದು, ಅಪ್ಪು ಪ್ರತಿಮೆಗೆ ಪೂಜೆ ಸಲ್ಲಿಸುತ್ತಿದ್ದಾರೆ.
ಅಪ್ಪು ಅಪ್ಪಟ ಅಭಿಮಾನಿಯಾಗಿರುವ ಪ್ರಕಾಶ್ ಕುಟುಂಬ ಪುಣ್ಯಸ್ಮರಣೆ ಹಿನ್ನೆಲೆ ತಾವು ನಿರ್ಮಿಸಿರುವ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದೆ. ಅಪ್ಪುಗೆ ಇಷ್ಟವಾದ ಸಿಹಿತಿಂಡಿ, ಅಡುಗೆ ಮಾಡಿ ನೈವೇದ್ಯ ಸಲ್ಲಿಸಲಾಯಿತು.
ಇದನ್ನೂ ಓದಿ: ಪುನೀತ್ ಪುಣ್ಯಸ್ಮರಣೆ: ಅಭಿಮಾನಿಗಳಿಂದ 10 ಕ್ವಿಂಟಲ್ ಚಿಕನ್ ಬಿರಿಯಾನಿ ವಿತರಣೆ
ಪುನೀತ್ ಅಭಿಮಾನಿ ಪ್ರಕಾಶ್ ಮೊರಬದ ಸಂಗೀತ ಶಿಕ್ಷಕನಾಗಿದ್ದು, ಪುನೀತ್ ಪ್ರತಿಮೆ ಬಳಿ ಗಿಟಾರ್, ಕ್ಯಾಸಿಯೋ ಹಾರ್ಮೋನಿಯಂ ಸೇರಿದಂತೆ ವಿವಿಧ ವಾದ್ಯಗಳನ್ನು ಇಟ್ಟು ಇಂದು ಪೂಜೆ ಸಲ್ಲಿಸಿದರು. ಯಲಗಚ್ಚ ಗ್ರಾಮಸ್ಥರು ಸಹ ಆಗಮಿಸಿ ಪುನೀತ್ ಪ್ರತಿಮೆಗೆ ಪೂಜೆ ಸಲ್ಲಿಸಿದರು. ಅಪ್ಪು ನಟಿಸಿದ ಚಿತ್ರಗಳು ಮತ್ತು ಅವರ ನಟನೆಯನ್ನು ಮೆಲುಕು ಹಾಕಲಾಯಿತು. ಅವರ ಸಮಾಜಸೇವೆ, ವಿವಿಧ ಸಂಘಸಂಸ್ಥೆಗಳಿಗೆ ನೀಡಿದ ಕೊಡುಗೆ ನೆನೆದು ಶ್ಲಾಘಿಸಲಾಯಿತು. ಪ್ರಕಾಶ್ ಅವರು ಸಂಪೂರ್ಣ ದಿನವನ್ನು ಪುನೀತ್ ರಾಜ್ಕುಮಾರ್ ಪೂಜೆಯಲ್ಲಿ ಕಳೆಯುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: 'ಅಪ್ಪು ಸವಿನೆನಪಿನಲ್ಲಿ 3 ವರ್ಷಗಳು': ಅಶ್ವಿನಿ ಪುನೀತ್ ರಾಜ್ಕುಮಾರ್